ಹುಬ್ಬಳ್ಳಿ: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕ್ರಮ ಕೈಗೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಎಲ್ಲಾ ಬಸ್ ಘಟಕಗಳಲ್ಲಿ ಡೆಟಾಲ್, ಫಿನಾಯಿಲ್ ಮತ್ತು ಸ್ಯಾನಿಟೈಜರ್ಗಳನ್ನು ಉಪಯೋಗಿಸಿ ಬಸ್ಸುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲಾ ಸಿಬ್ಬಂದಿಗೆ ಮಾಸ್ಕ್ಗಳನ್ನು ಉಪಯೋಗಿಸಲು ಸೂಚಿಸಲಾಗಿದೆ. ಬಸ್ ನಿಲ್ದಾಣಗಳ ಆವರಣಗಳು, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳ ಮತ್ತು ಶೌಚಾಲಯಗಳನ್ನು ಪದೇಪದೇ ಸ್ಯಾನಿಟೈಜರ್ ಉಪಯೋಗಿಸಿ ಸ್ವಚ್ಛಗೊಳಿಸಲು ಕ್ರಮವಹಿಸಲಾಗಿದೆ.
ಬಸ್ಗಳ ಸ್ವಚ್ಛತೆಯಲ್ಲಿ ನಿರತರಾದ ವಾಕರಸಾ ಸಂಸ್ಥೆ ಕೊರೊನಾ ವೈರಸ್ ಬಗ್ಗೆ ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕದ ಮೂಲಕ ಮಾಹಿತಿ ಬಿತ್ತರಿಸಿ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣಿಕರ ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 15 ಪ್ರತಿಷ್ಠಿತ, 20 ವೇಗದೂತ ಹಾಗೂ 25 ಸಾಮಾನ್ಯ ಸಾರಿಗೆಗಳು ಸೇರಿದಂತೆ 60 ಅನುಸೂಚಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬಸ್ಗಳ ಸ್ವಚ್ಛತೆಯಲ್ಲಿ ನಿರತರಾದ ವಾಕರಸಾ ಸಂಸ್ಥೆ ಪ್ರಯಾಣಿಕರ ಸಂಚಾರ ಪ್ರಮಾಣವನ್ನು ಗಮನಿಸಿ ಅಗತ್ಯವಿದ್ದಲ್ಲಿ ಇನ್ನಷ್ಟು ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಪ್ರತಿ ಬಸ್ ಘಟಕ ಮತ್ತು ಬಸ್ ನಿಲ್ದಾಣಕ್ಕೆ ಅಧಿಕಾರಿಗಳು ಮತ್ತು ಮೇಲ್ವಿಚಾರಕ ಸಿಬ್ಬಂದಿಯನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು, ನಿರಂತರ ಸ್ವಚ್ಛತೆ ಬಗ್ಗೆ ನಿಗಾವಹಿಸಲಾಗಿರುತ್ತದೆ ಎಂದು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.