ಹುಬ್ಬಳ್ಳಿ:ಕಿಲ್ಲರ್ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಷ್ಟು ದಿನ ನಗರದಲ್ಲಿ ಮಾತ್ರವೇ ರೌದ್ರ ನರ್ತನ ನಡೆಸಿದ್ದ ಕೊರೊನಾ ಈಗ ಹಳ್ಳಿಗಳಲ್ಲಿ ಕೂಡ ಆತಂಕವನ್ನು ಹುಟ್ಟು ಹಾಕಿದೆ. ಅಲ್ಲದೆ ಸೋಂಕಿತರ ಸಂಖ್ಯೆ ಕಡಿಮೆ ಆಗಿದ್ದರೂ ಸಾವಿನ ಪ್ರಕರಣ ಮಾತ್ರ ಕಡಿಮೆ ಆಗುತ್ತಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಕಳೆದ ತಿಂಗಳು ಬರೀ 77 ಸಾವು ಆಗಿದ್ದವು. ಆದರೆ ಕೋವಿಡ್ ರೌದ್ರ ನರ್ತನ ತಾರಕಕ್ಕೆ ಏರಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 334 ಸಾವು ಸಂಭವಿಸಿವೆ. ಕೊರೊನಾ ಸೋಂಕಿತರ ಸಾವಿನ ಡೆತ್ ರೇಟ್ ಶೇ. 1ರಷ್ಟಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಆದರೂ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಮಾತ್ರ ಹೆಚ್ಚುತ್ತಲೇ ಸಾಗಿದೆ. ಇದು ನಾಗರಿಕರಲ್ಲಿ ತಲ್ಲಣ ಸೃಷ್ಟಿಸಿದೆ. ಕೋವಿಡ್ ನಿಯಂತ್ರಿಸಲು ಸರ್ಕಾರ ನೈಟ್ ಕರ್ಫ್ಯೂ, ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್, ಕಠಿಣ ಲಾಕ್‌ಡೌನ್ ಘೋಷಣೆ ಮಾಡಿದರೂ ಕೂಡ ಮರಣ ಮೃದಂಗ ಮಾತ್ರ ಮೊಳಗುತ್ತಲೇ ಇದೆ.