ಹುಬ್ಬಳ್ಳಿ : ಮೂರು ಸಾವಿರ ಮಠದ ಆಸ್ತಿ ವಿವಾದ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಠದ ಆಸ್ತಿ, ಮಠಕ್ಕೆ ಉಳಿಯಬೇಕೆಂದು ದಿಂಗಾಲೇಶ್ವರ ಶ್ರೀ ಹೋರಾಟ ನಡೆಸಿದ್ದಾರೆ. ಶ್ರೀಗಳ ಹೋರಾಟಕ್ಕೆ ಮಠದ ಭಕ್ತರು ಬೆಂಬಲ ನೀಡುತ್ತಿರುವುದು ಒಂದು ಕಡೆಯಾದರೆ, ಇತ್ತ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕೆಎಲ್ಇ ಸಂಸ್ಥೆಯ ಮುಂದೆ ಕೆಲವು ಷರತ್ತುಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿತ್ತು. ಸದ್ಯ ಒಕ್ಕೂಟದ ಷರತ್ತುಗಳಿಗೆ ಸ್ಪಂದಿಸಿರುವ ಕೆಎಲ್ಇ ಸಂಸ್ಥೆಯ ನಡೆಯ ವಿರುದ್ಧ ದಿಂಗಾಲೇಶ್ವರ ಶ್ರೀ ಕಿಡಿಕಾರಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸಂಸ್ಥೆ ಕೆಎಲ್ಇ, ನಗರದ ಮೂರು ಸಾವಿರ ಮಠದ ಆಸ್ತಿಯಲ್ಲಿ ಕಾಲೇಜು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಮಠದ ಭಕ್ತರು, ಲಿಂಗಾಯತ ಸಮುದಾಯದ ಕೆಲ ಸಂಘಟನೆಗಳು ವಿರೋಧ ಮಾಡುತ್ತಿವೆ. ಅದರಲ್ಲೂ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕೆಎಲ್‌ಇ ಸಂಸ್ಥೆಯು ಆರು ಬೇಡಿಕೆಗಳನ್ನು ಈಡೇರಿಸಬೇಕೆಂದು ಪತ್ರ ಬರೆದು ಮನವಿ ಮಾಡಿತ್ತು.
ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕೆಎಲ್ಇ ಸಂಸ್ಥೆಗೆ ಬರೆದ ಪತ್ರಕ್ಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕೋರೆ ಪ್ರತಿಕ್ರಿಯೆ ನೀಡಿದ್ದಾರೆ. ಐದು ಬೇಡಿಕೆಗಳು ನಮಗೆ ಸಂಬಂಧಿಸಿವೆ. ಒಂದು ಮಠಕ್ಕೆ ಸಂಬಂಧಿಸಿದ್ದಾಗಿದೆ. ಧಾರವಾಡದ ಜಿಲ್ಲೆಯ ಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತೇವೆ. ಬೆಳಗಾವಿಯಲ್ಲಿನ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಈಗಾಗಲೇ ಉಚಿತ ಸೇವೆ ನೀಡುತ್ತ ಬಂದಿದ್ದು, ಅದು ಹುಬ್ಬಳ್ಳಿಯಲ್ಲಿಯೂ ಮುಂದುವರೆಯುತ್ತದೆ. ವೈದ್ಯಕೀಯ ಸೀಟುಗಳ ಹಂಚಿಕೆಯನ್ನು ರಾಜ್ಯ ಸರ್ಕಾರದ ನಿಯಮಗಳನ್ವಯ ಮಾಡಿಕೊಳ್ಳಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸೀಟು ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಐದು ಬೇಡಿಕೆಗಳಲ್ಲಿ ಮೂರಕ್ಕೆ ಒಪ್ಪಿಗೆ ನೀಡಲಾಗಿದೆ. ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಇದನ್ನು ಸ್ವಾಗತಿಸಿದ್ದು, ಉಳಿದ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದೆ.