ಹುಬ್ಬಳ್ಳಿ:ಉತ್ತರ ಪ್ರದೇಶ, ಬಿಹಾರ ಜನ ನಮ್ಮ ರಾಜ್ಯಕ್ಕೆ ದುಡಿಯೋಕೆ ಬರುತ್ತಾರೆ. ಮೆಡಿಕಲ್, ಇಂಜಿನಿಯರಿಂಗ್ ಓದಲು ಕೂಡ ನಮ್ಮ ರಾಜ್ಯಕ್ಕೆ ಬರುತ್ತಾರೆ. ಆದರೆ, ನಮ್ಮ ಮುಖ್ಯಮಂತ್ರಿಗಳಿಗೆ ಉತ್ತರ ಪ್ರದೇಶದ ಮಾಡೆಲ್ ಬೇಕಂತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹರಿಹಾಯ್ದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸ್ವಾತಂತ್ರ್ಯದ ದಿನದ ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರುತ್ತೇವೆ ಅಂತಾರೆ. ಆದರೆ, ಇತ್ತ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಶೇ.40ರಷ್ಟು ಕಮಿಷನ್ ಬಗ್ಗೆ ಮೋದಿಯವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಯಾಕೆ ಐಟಿ, ಇಡಿ ದಾಳಿ ಮಾಡಲ್ಲ ಎಂದು ಪ್ರಶ್ನಿಸಿದರು.
ಅಲ್ಲದೇ, ರಾಜ್ಯದಲ್ಲಿ ಸರ್ಕಾರವಿಲ್ಲ ಅಂತಾ ಅವರ ಸಂಪುಟ ಸಚಿವರೇ ಹೇಳುತ್ತಾರೆ. ಮ್ಯಾನೇಜ್ ಮಾಡುತ್ತೇವೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಸರ್ಕಾರದ ವಿರುದ್ಧ ನಾವು ಜನರ ಮನೆ-ಮನೆಗೆ ಹೋಗಿ ತಿಳಿಸುತ್ತೇವೆ. 140 ರಿಂದ 150 ಸ್ಥಾನಗಳನ್ನು ಪಡೆದು ನಾವು ಅಧಿಕಾರಕ್ಕೆ ಮತ್ತೆ ಬರುತ್ತೇವೆ. ನಾವು ಅಧಿಕಾರಕ್ಕೆ ಬಂದರೂ ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಕೆಟ್ಟ ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು. ಮತ್ತೆ ರಾಜ್ಯವನ್ನು ನಂಬರ್ ಓನ್ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಂ ಬಿ ಪಾಟೀಲ ಹೇಳಿದರು.