ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಂದಿದ್ದೇ ತಡ, ಸೋತ ಕೈ ಅಭ್ಯರ್ಥಿಯ ಪತಿ ಎಐಎಂಐಎಂ ಅಭ್ಯರ್ಥಿಯ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಹುಬ್ಬಳ್ಳಿಯ ಕರ್ಕಿಬಸವೇಶ್ವರ ನಗರದಲ್ಲಿ ನಡೆದಿದೆ.
ಸೋತ ಕಾಂಗ್ರೆಸ್ ಅಭ್ಯರ್ಥಿಯ ಗಂಡನಿಂದ AIMIM ಅಭ್ಯರ್ಥಿ ಪತಿ ಮೇಲೆ ಹಲ್ಲೆ - ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯ ಪತಿಯೊಬ್ಬ ಎಐಎಂಐಎಂ ಅಭ್ಯರ್ಥಿಯೋರ್ವರ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 69ರಲ್ಲಿ ಶ್ರೀನಿವಾಸ ಬೆಳದಡಿಯ ಹೆಂಡತಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಅದೇ ವಾರ್ಡಿನಲ್ಲಿ ವಿಜಯ ಗುಂಟ್ರಾಳ ತಮ್ಮ ಪತ್ನಿಯಯನ್ನು ಎಐಎಂಐಎಂ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿಯ ಗೆಲುವಾಗಿದೆ. ಸೋತ ಕಾಂಗ್ರೆಸ್ ಅಭ್ಯರ್ಥಿಯ ಪತಿ ಶ್ರೀನಿವಾಸ, ತಮ್ಮ ಸೋಲಿಗೆ ವಿಜಯ ಗುಂಟ್ರಾಳನೇ ಕಾರಣವೆಂದು ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ. ಗಲಾಟೆಯಲ್ಲಿ ಗುಂಟ್ರಾಳಗೆ ಪೆಟ್ಟಾಗಿದೆ ಎನ್ನಲಾಗಿದೆ.
ಈ ಘಟನೆ ನಡೆಯುತ್ತಿದ್ದ ಹಾಗೆಯೇ ಸ್ಥಳಕ್ಕೆ ತೆರಳಿದ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಐಎಂಐಎಂ ಸಾಕಷ್ಟು ವಾರ್ಡ್‌ಗಳಲ್ಲಿ ಆಘಾತ ನೀಡಿದ್ದನ್ನು ಇಲ್ಲಿ ಗಮನಿಸಬಹುದು.