ಧಾರವಾಡ: ಜಿಲ್ಲಾಧಿಕಾರಿ ಎದುರೇ 2 ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ವಾಸ್ತವ್ಯದ ಭಾಗವಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ ಗ್ರಾಮಗಳ ಮಾರ್ಗವಾಗಿ ವನಹಳ್ಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರು ತಡೆದು, ಮೊದಲು ಕೆಲವರು ಪ್ರತಿಭಟನೆ ನಡೆಸಿದರು.
ಈ ವೇಳೆ ಸರ್ಕಾರಿ ಶಾಲೆ ಜಾಗ ಅತಿಕ್ರಮಣ ಮಾಡಿದ್ದಾರೆಂದು ಕೆಲವರು ಆರೋಪಿಸಿದರು. ಇದು ನಮ್ಮ ಪಿತ್ರಾರ್ಜಿತ ಆಸ್ತಿ ಎಂದು ಮತ್ತೆ ಕೆಲವರು ವಾದಿಸಿದರು. ಕಾರು ತಡೆದ ಹಿನ್ನೆಲೆ ಕೆಳಗಿಳಿದು ಬಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಜಾಗ ವೀಕ್ಷಿಸಿದರು. ಶಾಲೆ ಜಾಗವನ್ನು ಡಿಸಿ ವೀಕ್ಷಿಸಿದ ಬಳಿಕ ಗುಂಪು ಘರ್ಷಣೆ ನಡೆದಿದೆ. ಗ್ರಾಮದ ಎರಡು ಗುಂಪುಗಳು ಕೈಕೈ ಮಿಲಾಯಿಸಿವೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ: ಒಂದು ಅಡಿಯಷ್ಟು ವಾಲಿದ ಪೊಲೀಸ್ ಕ್ವಾಟರ್ಸ್
ಸ್ಥಳದಲ್ಲಿ ಪೊಲೀಸರು ಇಲ್ಲದ ಹಿನ್ನೆಲೆ ಘರ್ಷಣೆ ತಾರಕಕ್ಕೇರಿದೆ. ಗುಂಪು ಘರ್ಷಣೆ ಶುರುವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸ್ಥಳದಿಂದ ತೆರಳಿದರು. ಕೊನೆಗೆ ಅಬಕಾರಿ ಸಿಬ್ಬಂದಿ ಗುಂಪನ್ನು ಚದುರಿಸಿದರು.