ಹುಬ್ಬಳ್ಳಿ: ಅಂತೂ ಇಂತೂ ಬಹು ನಿರೀಕ್ಷಿತ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆದಂತಾಗಿದೆ. ಸ್ಥಳೀಯ ಮಹಾನಗರ ಪಾಲಿಕೆಗೆ ಮುಂಬರುವ ಎರಡು ತಿಂಗಳಲ್ಲಿ ಚುನಾವಣೆ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಈ ದಿಸೆಯಲ್ಲಿ ರಾಜ್ಯ ಚುನಾವಣೆ ಆಯೋಗ ಹು-ಧಾ ಪಾಲಿಕೆ ಜತೆಗೆ ದೂರದ ಕಲಬುರ್ಗಿ ಪಾಲಿಕೆಗೂ ಎಲೆಕ್ಷನ್ ನಡೆಸಲು ಎಲ್ಲಾ ಸಿದ್ಧತೆಗಳನ್ನು ಆರಂಭಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳ ಮತದಾರರ ಪರಿಷ್ಕೃತ ಪಟ್ಟಿ ತಯಾರಿಸಿ ಜುಲೈ 9ರ ಒಳಗೆ ಆಯೋಗಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿರ್ದೇಶನದ ಬಗ್ಗೆ ಸ್ಥಳೀಯ ಪಾಲಿಕೆಯಲ್ಲಿ ಇನ್ನೂ ಯಾವುದೇ ವಿಷಯ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆ ಆಯೋಗವು ಜೂ,14ರಂದು ಲಿಖಿತ ನಿರ್ದೇಶನ ನೀಡಿದ್ದು, ಮಂಗಳವಾರ ತಿಳಿದು ಬಂದಿದೆ. ಮತದಾರ ಪರಿಷ್ಕರಣೆ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆಗಳು ದಟ್ಟವಾಗಿವೆ. ಕೊರೊನಾ ಎರಡನೇ ಅಲೆ ತಕ್ಕ ಮಟ್ಟಿಗೆ ತಹಬದಿಗೆ ಬಂದಿರುವ ಹಿನ್ನೆಲೆ ಹಾಗೂ ಮೂರನೇ ಅಲೆ ಬರುವ ಮುನ್ನವೇ ಎರಡೂ ಪಾಲಿಕೆಗಳಿಗೆ ಚುನಾವಣೆ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಚುನಾವಣೆ ಆಯೋಗ ಬಂದಿದೆ.
ಕೊರೊನಾ ಮೂರನೇ ಅಲೆಯ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಆಗಸ್ಟ್ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಶುರುವಾಗಿ ಸಪ್ಟೆಂಬರ್ ತಿಂಗಳಲ್ಲಿ ಪಾಲಿಕೆಗೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವುದರಲ್ಲಿ ಅನುಮಾನವಿಲ್ಲ.
ವಾರ್ಡಗಳ ವಿಂಗಡಣೆ ಅಧಿಸೂಚನೆಯಂತೆ ಮತದಾರರನ್ನು ಗುರುತಿಸಲು ಜೂ. 17ರಿಂದ 19 ರವರಗೆ ಅವಕಾಶ ನೀಡಲಾಗಿದೆ. ಜೂ. 28ರಂದು ಮತದಾರರ ಕರಡುಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಬೇಕು. ಜು.1ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ತಿದ್ದುಪಡಿ, ಪುನರ್ ಪರಿಶೀಲನೆ ಸೇರಿ ಎಲ್ಲ ಪ್ರಕ್ರಿಯೆ ಮುಗಿಸಿ ಜುಲೈ 9ರಂದು ಅಂತಿಮ ಪಟ್ಟಿ ಸಲ್ಲಿಸುವಂತೆ ರಾಜ್ಯ ಚುನಾವಣೆ ಆಯೋಗ ನಿರ್ದೇಶನ ನೀಡಿದೆ.