ಹುಬ್ಬಳ್ಳಿ:ಲೋಕೋಪಯೋಗಿ ಬಂದರು, ಒಳನಾಡು ಜಲಸಾರಿಗೆ ಇಲಾಖೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ - 73ರ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನ ಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿದರು.
ಹುಬ್ಬಳ್ಳಿಯಲ್ಲಿ ಟೆಂಡರ್ ಶ್ಯೂರ್ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮ ಬಳಿಕ ಮಾತನಾಡಿಸ ಬಿಎಸ್ವೈ, ರಾಜ್ಯದ ಆರ್ಥಿಕ ಸ್ಥಿತಿಗಳನ್ನು ಅನುಸರಿಸಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ದೂರದೃಷ್ಟಿಯೊಂದಿಗೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಜ್ಯದ ಇತರ ನಗರಗಳಲ್ಲೂ ಇದೇ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗುವುದು. ನೃಪತುಂಗ ಬೆಟ್ಟದಲ್ಲಿ ಒಳ್ಳೆಯ ಪರಿಸರವಿದೆ, ಸರ್ಕಾರದಿಂದ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರು ದೇಶದ ಹೆದ್ದಾರಿ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ಹಣ ಮೀಸಲಿರಿಸಿರುವುದಾಗಿ ತಿಳಿಸಿದ್ದಾರೆ. ಈ ಅನುದಾನದಲ್ಲಿ ರಾಜ್ಯದ ಹೆದ್ದಾರಿಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. 900 ಕೋಟಿ ರೂ.ವೆಚ್ಚದಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಬಿ.ಆರ್.ಟಿ.ಎಸ್ ರಸ್ತೆ ನಿರ್ಮಿಸಿರುವುದರಿಂದ ಕಡಿಮೆ ಸಮಯದಲ್ಲಿ ಜನರು ಅವಳಿ ನಗರದ ನಡುವೆ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, 2012ರಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿತ್ತು. ವಿದೇಶಿ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಿ, ವಿದ್ಯುತ್, ನೀರು, ಕೇಬಲ್, ಗ್ಯಾಸ್, ಯುಜಿಡಿ ಸೇರಿದಂತೆ ಇತರೆ ಬಳಕೆಯನ್ನು ಗಮನದಲ್ಲಿರಿಸಿಕೊಂಡು ಮೊದಲೇ ಯೋಜಿಸಿ ರಸ್ತೆ ನಿರ್ಮಿಸಲಾಗಿದೆ. ಅಂದು ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪನವರು ರಸ್ತೆ ನಿರ್ಮಾಣಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿ 34 ಕೋಟಿ ಹಣ ಮಂಜೂರು ಮಾಡಿದರು. ಜನ ಅರ್ಬನ್ ಫೌಂಡೇಷನ್ನ ಸ್ವಾತಿ ರಾಮನಾಥನ್ ಅವರು ಉಚಿತವಾಗಿ ರಸ್ತೆಯ ನೀಲನಕ್ಷೆ ಹಾಗೂ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಒಟ್ಟು 2 ಕಿ.ಮೀ. ಟೆಂಡರ್ ಶ್ಯೂರ್ ರಸ್ತೆಯನ್ನು 46 ಕೋಟಿ ವೆಚ್ಚದಲ್ಲಿ ನಿರ್ಮಿಸಿಲಾಗಿದೆ ಎಂದರು.
ಮಾಜಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಮಾತನಾಡಿ, ರಾಜ್ಯದ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ, ಹಿಂದಿನ ಸರ್ಕಾರದ ಲೋಕೋಪಯೋಗಿ ಸಚಿವನಾದ ನನ್ನನ್ನು ಸಭೆಗೆ ಆಹ್ವಾನಿಸಿರುವುದು ಸಂತಸವಾಗಿದೆ. 2018 ರ ಜನವರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ನಿಗದಿತ ಅವಧಿಯೊಳಗೆ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ ಶ್ರಮಿಸಿದ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.