ಹುಬ್ಬಳ್ಳಿ :ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚಿನ ವಿಚಾರಗಳು ಹೊರ ಬೀಳುತ್ತಿವೆ. ಅಕ್ರಮದಲ್ಲಿ ಭಾಗಿಯಾದವರ ಬಂಧನಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಕ್ರಮದಲ್ಲಿ ಎಷ್ಟೇ ಪ್ರಭಾವಿ ಇರಲಿ, ಎಷ್ಟೇ ಚಾಣಾಕ್ಷ ಇದ್ದರೂ, ಬಂಧಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಜನರಿಗೆ ನ್ಯಾಯ ಸಿಗಲಿದೆ ಎಂದರು.
ಹುಬ್ಬಳ್ಳಿ ಗಲಭೆಯನ್ನ ನಾವು ಸಾಮಾನ್ಯ ಗಲಭೆ ಎಂದು ಪರಿಗಣಿಸಿಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ಪೊಲೀಸ್ ಠಾಣೆಯನ್ನೇ ಟಾರ್ಗೆಟ್ ಮಾಡಿ, ಸಂಚಿತ ದಾಳಿ ನಡೆಸಲಾಗಿದೆ. ಇದರಲ್ಲಿ ಬೇರೆ ಬೇರೆ ಶಕ್ತಿಗಳ ಕುಮ್ಮಕ್ಕಿನ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ಇದರ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಲಾಗುವುದು ಎಂದರು.