ಹುಬ್ಬಳ್ಳಿ (ಧಾರವಾಡ): ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಮಗು ಸಾವನ್ನಪ್ಪಿದ್ದು ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಉಣಕಲ್ ಮೂಲದ ಸಂಜೀವ ಮತ್ತು ಕೀರ್ತಿ ದಂಪತಿಯ ಪುತ್ರಿ 2.5 ವರ್ಷದ ರಕ್ಷಾ ಚೌಧರಿಯನ್ನು ರಕ್ತನಾಳದ ಸಮಸ್ಯೆ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಕಿಮ್ಸ್ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಏರುಪೇರಾಗಿ ಇಂದು ಬೆಳಗಿನ ಜಾವ ಮಗು ಮೃತಪಟ್ಟಿದೆ.
ಶಸ್ತ್ರ ಚಿಕಿತ್ಸೆ ನಂತರ ಸಾವನ್ನಪ್ಪಿದ ಮಗು, ಕುಟುಂಬಸ್ಥರ ಆಕ್ರೋಶ ರವಿವಾರವಷ್ಟೇ ರಕ್ಷಾಳನ್ನ ಪೋಷಕರು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಆಸ್ಪತ್ರೆಗೆ ಚೆಕಪ್ಗೆ ಬಂದಿದ್ದರು. ಹೆಮಾಂಜಿಯೋಮಾ ಎಂಬ ರೋಗದಿಂದ ಬಳಲುತ್ತಿದ್ದಾಳೆ. ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಅದನ್ನ ತೆಗೆಯಬೇಕು ಅಂತ ವೈದ್ಯರು ಹೇಳಿದ್ದರು ಎಂದು ಪೋಷಕರು ತಿಳಿಸಿದ್ದಾರೆ.
ಆದರೆ, ಚುಚ್ಚುಮದ್ದು ನೀಡುವಾಗ ರಕ್ತಸ್ರಾವ ಹೆಚ್ಚಾಗಿದೆ ಎಂದು ಪೋಷಕರ ಅನುಮತಿ ಪಡೆಯದೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಂತರ 2 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿ ಮಗು ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗು ಸಾವನ್ನಪ್ಪಿದ ಬಳಿಕ ಕಿಮ್ಸ್ ನ ವೈದ್ಯರು ಮಗುವಿನ ಪೋಷಕರ ಬಳಿ ಪತ್ರ ಬರೆಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಸಹಿ ಮಾಡಿಸಿಕೊಂಡಿದ್ದು, ಆಪರೇಷನ್ ಮಾಡುವ ಬಗ್ಗೆ ಒಂದು ಮಾತು ಹೇಳಿದ್ದರೂ ನಾವು ಮಗುವನ್ನ ಕರೆದುಕೊಂಡು ಹೋಗುತ್ತಿದ್ದೆವು ಎಂದು ರಕ್ಷಾ ತಂದೆ-ತಾಯಿ ಹೇಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ಮಗು ಸಾವು; ಕಿಮ್ಸ್ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಚೆಕಪ್ ಅಂತ ಬಂದ ಮಗುವಿನ ಸಾವಿಗೆ ವೈದ್ಯರೇ ನೇರ ಕಾರಣರಾಗಿದ್ದಾರೆ. ಆಪರೇಷನ್ ಮಾಡುವಾಗ ನಮಗೆ ಯಾಕೆ ಹೇಳಿಲ್ಲ, ಈಗ ನಮ್ಮ ಮಗು ಬದುಕಿಸಿಕೊಡಿ ಎಂದು ವೈದ್ಯರ ಬಳಿ ಅಂಗಲಾಚಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ!
ಕುಟುಂಬಸ್ಥರು ಮಾಡಿರುವ ವೈದ್ಯರ ನಿರ್ಲಕ್ಷ್ಯ ಆರೋಪವನ್ನು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ನಿರಾಕರಿಸಿದ್ದಾರೆ. 'ನಮ್ಮ ಕಡೆಯಿಂದ ಎಷ್ಟು ಸಾಧ್ಯವಾಗಿದೆಯೋ ಅಷ್ಟು ಪ್ರಾಮಾಣಿಕವಾಗಿ ಮಗುವನ್ನು ಉಳಿಸಲು ಪ್ರಯತ್ನಿಸಿದ್ದೇವೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಇಲ್ಲವೇ ಇಲ್ಲ. ಪೋಷಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ' ಎಂದರು.