ಧಾರವಾಡ: ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಮುಂದುವರಿದಿವೆ. ನಗರದಲ್ಲಿ ಈ ಕುರಿತು ಮಾತನಾಡಿರುವ ಮುಸ್ಲಿಂ ಸಮಾಜದ ಮುಖಂಡ ಇಸ್ಮಾಯಿಲ್ ತಮಟಗಾರ, ಹಲಾಲ್ ಕಟ್ ವಿವಾದ ವಿಚಾರದಲ್ಲಿ ಬಿಜೆಪಿ ಒಂದೇ ಸಮಾಜವನ್ನು ಗುರಿಯಿಟ್ಟು ರಾಜಕೀಯ ಮಾಡುತ್ತಿದೆ. ಹಿಜಾಬ್ ಪ್ರಕರಣ, ಹಿಂದೂಯೇತರ ವ್ಯಾಪಾರ ಆಯ್ತು. ಈಗ ಹಲಾಲ್-ಜಟ್ಕಾ ವಿವಾದವನ್ನು ಎಬ್ಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ ಮಾತನಾಡಿದರು. ಮೂರು ತಿಂಗಳಿನಿಂದ ಬಿಜೆಪಿ ನಾಯಕರು ಕುತಂತ್ರ ನಡೆಸಿದ್ದಾರೆ. ಮುಸ್ಲಿಂರಿಗಿಂತ ಹೆಚ್ಚು ಬಿಜೆಪಿಯವರು ಕುರಾನ್ ಓದುತ್ತಿದ್ದಾರೆ ಅನ್ಸುತ್ತೆ. ಇದನ್ನು ನೋಡಿ ನಮಗೆ ನಾಚಿಕೆ ಆಗುತ್ತಿದೆ ಎಂದು ವ್ಯಂಗ್ಯವಾಡಿದರು. ಸೌದಿ ಅರೇಬಿಯಾದಲ್ಲಿ ಯಾರೋ ಇಸ್ಲಾಂ ಪ್ರಚಾರಕ್ಕೆ ಬಿಜೆಪಿಗೆ ಹೇಳಿರಬೇಕು. ಬಿಜೆಪಿ ವಿವಾದಗಳಿಂದ ನಮ್ಮ ಸಮಾಜ ಜಾಗೃತವಾಗಿದೆ. ವಿವಾದಗಳನ್ನೇ ನಮ್ಮ ಧರ್ಮಿಯರು ಸಕಾರಾತ್ಮಕವಾಗಿ ತಗೋತಾ ಇದಾರೆ ಎಂದು ತಮಟಗಾರ ಹೇಳಿದರು.
ಮೊದಲು ಚಂದಾ ಸಂಗ್ರಹಿಸಿಕೊಂಡು ನಮ್ಮವರು ಮಸೀದಿ ಕಟ್ಟುತ್ತಿದ್ದರು. ಈಗ ಶಾಲಾ-ಕಾಲೇಜು ಆರಂಭಕ್ಕೆ ಮುಂದಾಗುತ್ತಿದ್ದಾರೆ. ಬಿಜೆಪಿ ಮಾಡುತ್ತಿರುವುದನ್ನೆಲ್ಲ ಸಕಾರಾತ್ಮಕವಾಗಿ ಮುಸ್ಲಿಂ ಸಮಾಜದವರು ತಗೋತಾ ಇದಾರೆ. ಮೊದಲು ಜಾತ್ರೆ ಇದ್ದಾಗ ಮಾತ್ರ ಮುಸ್ಲಿಮರು ಅಂಗಡಿ ಹಾಕುತ್ತಿದ್ದರು. ಜಾತ್ರೆಗಳು ಮುಗಿದ ಮೇಲೆ ಖಾಲಿ ಇರುತ್ತಿದ್ದರು. ಆದರೆ ಇವರು ಅಲ್ಲಿಯೂ ವಿವಾದ ಮಾಡಿದ್ದಾರೆ. ಈಗ ವರ್ಷವಿಡೀ ದುಡಿಯೋಕೆ ನಮ್ಮವರು ಮುಂದಾಗಿದ್ದಾರೆ. ಈಗ ಹಲಾಲ್-ಜಟ್ಕಾ ವಿವಾದ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಜಟ್ಕಾ ಕಟ್ ಮಾಂಸ ತಿನ್ನುವುದಕ್ಕೆ ಯಾರೂ ಬೇಡ ಅಂದಿಲ್ಲ. ಯಾರಿಗೂ ಜಟ್ಕಾ ಕಟ್ ಅಂಗಡಿ ತೆಗೆಯಬೇಡಿ ಎಂದೂ ಹೇಳಿಲ್ಲ. ಜಟ್ಕಾ ಬಗ್ಗೆ ನಮ್ಮ ಸಮಾಜದ ವಿರೋಧ ಇಲ್ಲ. ನೀವು ಬೇಕಾದಷ್ಟು ಜಟ್ಕಾ ಅಂಗಡಿ ತೆಗೆದುಕೊಳ್ಳಿ, ಆದರೆ ಹಲಾಲ್ ಮಾಡೋರಿಗೆ ತೊಂದರೆ ಮಾಡಬೇಡಿ. ಈಗ ರಂಜಾನ್ ತಿಂಗಳು ನಡೆಯುತ್ತಿದೆ. ಇದು ಬಸವಣ್ಣನವರ ನಾಡು, ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇರಬೇಕು. ರಂಜಾನ್ ತಿಂಗಳಿನಲ್ಲಿ ಯಾರಿಗೂ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.
ಹಿಂದೂ ಸಂಘಟನೆಗಳಿಂದ ವ್ಯಾಪಾರ ಬಹಿಷ್ಕಾರ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ಸಮಾಜದ ಮಸೀದಿ, ಕಾಂಪ್ಲೆಕ್ಸ್‌ಗಳಲ್ಲಿಯೂ ಹಿಂದೂಗಳ ಅಂಗಡಿ ಬೇಡ ಅಂತಾ ಹೇಳಲಿ. ಮುಸ್ಲಿಂ ಕಾಂಪ್ಲೆಕ್ಸ್ಗಳಲ್ಲಿ ಅಂಗಡಿ ಇಡಬೇಡಿ, ನಿಮಗೆ ನಾವು ಜಾಗ ಕೊಡುತ್ತೇವೆ ಬನ್ನಿ ಅಂತಾ ಕರೆಯುವ ಧಮ್ ಇದೆಯಾ? ಇವರಿಗೆ ಅಂಜುಮನ್ ಕಾಂಪ್ಲೆಕ್ಸ್, ಮಸೀದಿ ಕಾಂಪ್ಲೆಕ್ಸ್ಗಳಲ್ಲಿ ಹಿಂದೂಗಳ ಅಂಗಡಿಗಳು ಸಹ ಇವೆ. ನಾವು ಯಾರಿಗೂ ಬೇಡ ಎಂದಿಲ್ಲ. ಬಿಜೆಪಿ ಅಂಬೇಡ್ಕರ್ ಸಂವಿಧಾನ ಓದುತ್ತಿಲ್ಲ. ಕೇವಲ ಕುರಾನ್ ಓದುತ್ತಿದ್ದಾರೆ. ನಮ್ಮ ಸಂಪ್ರದಾಯದಲ್ಲಿ ಕುಳಿತು ನೀರು ಕುಡಿಯುವುದು ಇದೆ. ನಾಳೆ ಕುಳಿತು ನೀರು ಕುಡಿಯಬೇಡಿ ಅಂತಾರೆ. ಮುಂದೆ ರೋಜಾ ಮಾಡಬೇಡಿಯೂ ಅಂತಾರೆ. ರೈತರ ಸಮಸ್ಯೆ, ನಿರುದ್ಯೋಗದ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಆರ್‌ಎಸ್‌ಎಸ್, ಬಿಜೆಪಿಯವರ ಆದೇಶಕ್ಕೆ ಹೆದರಿಕೊಳ್ಳಬೇಡಿ.. ರೈತರು, ವ್ಯಾಪಾರಿಗಳ ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲಲಿದೆ.. ಡಿಕೆಶಿ
ಕರಾವಳಿ ಭಾಗದಲ್ಲಿ ಮಾತ್ರ ಈ ವಿಚಾರ ಹೆಚ್ಚು ವಿವಾದ ಮಾಡುತ್ತದೆ. ಕೆಲವು ಸಂಘಟನೆಗಳು ಬಿಜೆಪಿಯ ಬಿ ಟೀಮ್ ಆಗಿ, ಬಿಜೆಪಿಯವರಿಗೆ ಇಂತಹ ವಿವಾದಗಳನ್ನು ಸರಕಾಗಿ ನೀಡುತ್ತಿದ್ದಾರೆ. ಅದೇ ಕಾರಣಕ್ಕೆ ಈ ಎಲ್ಲ ವಿವಾದ ಆಗುತ್ತಿವೆ. ಕರಾವಳಿ ಭಾಗದಲ್ಲಿ ಮುಸ್ಲಿಂ ನಾಯಕತ್ವವೂ ಬಲವಾಗಿ ಇಲ್ಲ. ಹೀಗಾಗಿ ಅದರ ದುರುಪಯೋಗ ಆಗುತ್ತಿದೆ. ನಮ್ಮ ಭಾಗದಲ್ಲಿ ಮುಸ್ಲಿಂ ನಾಯಕತ್ವ ಚೆನ್ನಾಗಿದೆ. ಹೀಗಾಗಿ ಇಲ್ಲಿ ವಿವಾದ ಆಗಲು ಬಿಡುವುದಿಲ್ಲ ಎಂದರು.