ಹುಬ್ಬಳ್ಳಿ: ಇತ್ತ ಹುಬ್ಬಳ್ಳಿಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಭದ್ರವಾಗಿರುವುದು ಖಾತ್ರಿಯಾದ ಮಧ್ಯೆಯೇ ಅತ್ತ ಧಾರವಾಡದವರಾದ ಶಾಸಕ ಅರವಿಂದ್ ಬೆಲ್ಲದ್ ತಮ್ಮ ಹುಬ್ಬಳ್ಳಿ - ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ದಶಕದ ನಂತರ ವಾಣಿಜ್ಯ ನಗರಿಯಲ್ಲಿ ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿರುವ ಮಧ್ಯೆಯೇ ಬೆಲ್ಲದ್ ಅವರು ತಮ್ಮ ಸ್ಥಾನ ತ್ಯಜಿಸುವುದನ್ನು ಖಚಿತ ಪಡಿಸಿದ್ದು, ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಬರುವ ಸಂಕ್ರಾತಿಯೊಳಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಬೆಲ್ಲದ್ ಅವರು ಕಾರ್ಯಕಾರಿಣಿಗೆ ಗೈರು ಹಾಜರಾಗಿದ್ದಾರೆ.
ಕಾರ್ಯಕಾರಿಣಿ ಸಭೆಯಲ್ಲೂ ಈ ವಿಷಯ ಎಲ್ಲೆಡೆ ಚರ್ಚೆಗೂ ಗ್ರಾಸವಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ಸಿಎಂ ಆಕಾಂಕ್ಷಿಗಳ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದ ಅರವಿಂದ್ ಬೆಲ್ಲದ್ ನಂತರ ನಡೆದ ವಿದ್ಯಮಾನದಿಂದ ಎಲ್ಲವನ್ನೂ ಸಹಿಸಿಕೊಂಡು ಇದೀಗ ಪಕ್ಷದ ಚಟುವಟಿಕೆಗಳಲ್ಲಿ ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅಸಹಾಯಕತೆ ನೆಪದಲ್ಲಿ ಸ್ಥಾನ ತ್ಯಜಿಸಲು ಮುಂದಾಗಿರುವದು ಗುಟ್ಟಾಗೇನೂ ಉಳಿದಿಲ್ಲ.
ಈ ಹಿಂದಿನಿಂದಲೂ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಹೆಚ್ಚಾಗಿ ಹುಬ್ಬಳ್ಳಿಯವರ ಪಾಲಿಗೇ ಒಲಿದು ಬಂದಿದೆ. ಒಂದರ್ಥದಲ್ಲಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಶಿಷ್ಯರೇ ಈ ಸ್ಥಾನವನ್ನು ಅಧಿಕ ಸಲ ಅಲಂಕರಿಸಿದ್ದಾರೆ. ಆಕಸ್ಮಿಕ ಎಂಬಂತೆ ಅರವಿಂದ್ ಬೆಲ್ಲದ್ ಅವರಿಗೆ ಪ್ರಾಪ್ತವಾಗಿದ್ದ ಮಹಾನಗರ ಜಿಲ್ಲಾ ಅಧ್ಯಕ್ಷ ಹುದ್ದೆ ಹುಬ್ಬಳ್ಳಿಯ ಕೆಲವರ ಅಸಹಕಾರದಿಂದ ಬೆಲ್ಲದ್ ಅವರಿಗೆ ಈ ಸ್ಥಾನದಲ್ಲಿ ಮುಂದುವರೆಯಲು ಮುಜುಗರಕ್ಕೀಡು ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ:ಅತ್ಯಾಚಾರ - ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಚಪ್ಪಲಿ ಎಸೆದ ಅಪರಾಧಿ!
ದೊಡ್ಡ ಉದ್ಯಮಿಯಾಗಿರುವ ಅರವಿಂದ್ ಬೆಲ್ಲದ್ ಅವರ ಒಡೆತನದ ಪ್ರತಿಷ್ಠಿತ ವಾಹನಗಳ ಮಾರಾಟ, ಡೀಲರ್ಶಿಪ್ನ ಬೃಹತ್ ಮಳಿಗೆಗಳು ಅವಳಿನಗರದಲ್ಲಿದ್ದು, ಅವುಗಳ ನಿರ್ವಹಣೆಯೂ ಶಾಸಕರ ಮೇಲಿದೆ. ಹೀಗಾಗಿ, ಮೊದಲಿನಿಂದಲೂ ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಸ್ವತಃ ಬೆಲ್ಲದ್ ಅವರೇ ಅಧ್ಯಕ್ಷ ಪದವಿಯಿಂದ ವಿಮುಕ್ತಿ ಹೊಂದಲು ಬಯಸಿದ್ದಾರೆಂದು ಹೇಳಲಾಗುತ್ತಿದೆ.
ಬೆಲ್ಲದ್ ಅವರಿಂದ ತೆರವುಗೊಳ್ಳುವ ಸ್ಥಾನದಲ್ಲಿ ಧಾರವಾಡದಿಂದ ಸಂಜಯ ಕಪಟಕರ್, ಹುಬ್ಬಳ್ಳಿಯ ಮಲ್ಲಿಕಾರ್ಜುನ್ ಸಾವುಕಾರ, ತಿಪ್ಪಣ್ಣ ಮಜ್ಜಗಿ ಹಾಗೂ ಸಂಘ ಪರಿವಾರದ ದತ್ತಮೂರ್ತಿ ಕುಲಕರ್ಣಿ ಮುಂದಿನ ಮಹಾನಗರ ಜಿಲ್ಲಾ ಅಧ್ಯಕ್ಷರಾಗುವ ಪಟ್ಟಿಯಲ್ಲಿದ್ದು, ಈ ನಾಲ್ವರಲ್ಲಿ ಯಾರಿಗೆ ಸ್ಥಾನ ಒಲಿದು ಬರುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ.