ಹುಬ್ಬಳ್ಳಿ(ಧಾರವಾಡ) :ಮುಗಿಲೆತ್ತರಕ್ಕೆ ತಲೆಯೆತ್ತಿರುವ ಕಟ್ಟಡ. ಒಳಗೆ ಹೋದಂತೆ ನಿಸರ್ಗ ಸೌಂದರ್ಯ ಉಣಬಡಿಸುವ ಪರಿಸರ. ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನಲೋಕ ಮ್ಯೂಸಿಯಂ/ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ.
ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಇನ್ಮುಂದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.