ಹುಬ್ಬಳ್ಳಿ: ಸದನದಲ್ಲಿ ಭದ್ರಾವತಿ ಶಾಸಕ ಶರ್ಟ್ ಬಿಚ್ಚಿದ ಪ್ರಕರಣ ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ. ಶಾಸಕರ ಸ್ಥಾನದಲ್ಲಿದ್ದವರು ಘನತೆಯಿಂದ ಇರಬೇಕು, ಸದನದ ಗೌರವ ಉಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮಾಧ್ಯಮದ ಜೊತೆಗೆ ಮಾತನಾಡಿದ ಬಸವರಾಜ ಹೊರಟ್ಟಿ ನಗರದಲ್ಲಿಂದು ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನಪ್ರತಿನಿಧಿಗಳಾದವರು ಕೆಲವು ವಿಷಯದಲ್ಲಿ ಸಮಾಧಾನದಿಂದ ವರ್ತಿಸಬೇಕು. ಸಭಾಪತಿ ಅಥವಾ ಸ್ಪೀಕರ್ಗೆ ಹೋಗಿ ಮನವಿ ಮಾಡಬೇಕು. ಅದನ್ನು ಹೊರತುಪಡಿಸಿ ಈ ರೀತಿ ಮಾಡುವುದು ಸರಿ ಅಲ್ಲ ಎಂದು ಸೂಚನೆ ನೀಡಿದರು.
ಸಿಡಿ ಪ್ರಕರಣ ಬೆನ್ನಲ್ಲೇ 6 ಸಚಿವರು ಕೋರ್ಟ್ ಮೆಟ್ಟಿಲೇರಿರುವ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ಇರಬೇಕು. ಪರಿಷತ್ ಕಲಾಪದಲ್ಲಿ ಮಾಧ್ಯಮವನ್ನು ಬ್ಯಾನ್ ಮಾಡಿ ಎಂದರು. ಆದರೆ ನಾನು ಮಾತ್ರ ಬ್ಯಾನ್ ಮಾಡಿಲ್ಲ, ಮಾಧ್ಯಮದವರು ಎಷ್ಟು ಜನ ಇರುತ್ತಾರೋ ನಮಗೆ ಒಳ್ಳೆಯದು ಎಂದು ಅವರು ಹೇಳಿದರು.
ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರು ನೀಡಿರುವ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.