ಹುಬ್ಬಳ್ಳಿ: ನಾವು ಜನರ ಮನಸ್ಸನ್ನು ಗೆಲ್ಲುವ ಮಾತುಗಳನ್ನು ಆಡಬೇಕು. ಉಪಚುನಾವಣೆಯ ವೇಳೆ ವೈಯಕ್ತಿಕ ನಿಂದನೆ ಸರಿಯಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿಂದು ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ವಾದಕ್ಕೆ ಬಿದ್ದು ವಾದ ಮಾಡುವುದು ಸರಿಯಲ್ಲ. ಜನರ ಧ್ವನಿಯನ್ನು ಮಾಧ್ಯಮಗಳು ಬಿಂಬಿಸುತ್ತಿವೆ. ಜನ, ಜನರ ಸಮಸ್ಯೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ:ಮಂಡ್ಯ ನೂತನ ಎಸ್ಪಿಯಾಗಿ ಡಾ.ಸುಮನ್ ಡಿ.ಪನ್ನೇಕರ್ ನೇಮಕ
ಕೇರಳ ಹಾಗೂ ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕೇರಳ ಸಿಎಂ ಜೊತೆ ಮಾತನಾಡಿದ್ದೇನೆ. ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ರಾಜ್ಯದ ಜನರು ನಿಮ್ಮ ದುಃಖದಲ್ಲಿ ಭಾಗಿಯಾಗಲು ಸಿದ್ಧ ಎಂದು ಹೇಳಿದ್ದೇನೆ. ಇನ್ನು, ಉತ್ತರಾಖಂಡದ ವಿಚಾರವಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ರಾಜ್ಯ ಸರ್ಕಾರ ಎಲ್ಲ ನೆರವು ನೀಡಲು ಸಿದ್ದವಾಗಿದೆ. ಕನ್ನಡಿಗರ ರಕ್ಷಣೆ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಸಿಎಂ ಹೇಳಿದರು.