ಧಾರವಾಡ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವನ್ನು ಶಿಕ್ಷಣ ಇಲಾಖೆಗೆ ಬಿಡಬೇಕು. ಇದರಲ್ಲಿ ಯಾರು ಕೂಡಾ ರಾಜಕಾರಣ ಮಾಡಬಾರದು ಎಂದು ಬಿಜೆಪಿ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದರು. ಇನ್ನು, ಬಸವಣ್ಣನವರ ವಿಷಯ ಬಂದಾಗ ಅಪಪ್ರಚಾರ ಆಗಬಾರದು ಮತ್ತು ಬಸವಣ್ಣನ ಕುರಿತಾಗಿ ಯಾರೇ ಒಳ್ಳೆಯ ಕೆಲಸ ಮಾಡಿದರೂ ನನ್ನ ಸಹಮತವಿದೆ ಎಂದರು.
ಬೇರೆ ದೇಶಗಳಲ್ಲಿ ಸರ್ಕಾರಗಳು ಬದಲಾದರೂ ಶಿಕ್ಷಣ ನೀತಿ ಬದಲಾಗುವುದಿಲ್ಲ. ನಮ್ಮ ದೇಶದಲ್ಲಿ ಸರ್ಕಾರ, ಮಂತ್ರಿಗಳು ಬಂದಾಗಲೆಲ್ಲಾ ಶಿಕ್ಷಣ ಕ್ರಮ ಬದಲಾಗುತ್ತಿದೆ. ಚುನಾವಣೆ ಮುಗಿದ ಬಳಿಕ ಈಗಿನ ಪಠ್ಯದ ಬಗ್ಗೆ ಅಧ್ಯಯನ ಮಾಡುತ್ತೇನೆ. ಬಳಿಕ ನನಗೆ ತಿಳಿದ ಸಲಹೆ ನೀಡುತ್ತೇನೆ ಎಂದು ಹೊರಟ್ಟಿ ಹೇಳಿದರು.
ಸಿದ್ದರಾಮಯ್ಯಗೆ ತಿರುಗೇಟು:ಹೊರಟ್ಟಿಗೆ ವಯಸ್ಸಾಗಿದೆ. ಮೊಮ್ಮಕ್ಕಳನ್ನು ಆಡಿಸುತ್ತಾ ಕುಳಿತುಕೊಳ್ಳಲಿ ಎಂದಿದ್ದ ಸಿದ್ದರಾಮಯ್ಯಗೆ ಅದೇ ದಾಟಿಯಲ್ಲಿ ತಿರುಗೇಟು ನೀಡಿದ ಹೊರಟ್ಟಿ, ಸಿದ್ದರಾಮಯ್ಯ ನನಗಿಂತ ಒಂದು ವರ್ಷ ಹತ್ತು ತಿಂಗಳು ದೊಡ್ಡವ. ಅವನಿಗೆ ಎರಡ್ಮೂರು ಮೊಮ್ಮಕ್ಕಳಿದ್ದಾರೆ. ಕರೆದುಕೊಂಡು ಕುಳಿತುಕೊಳ್ಳಬೇಕಿತ್ತಲ್ಲ?, ಒಬ್ಬರ ಕಣ್ಣಲ್ಲಿ ಬೆರಳು ಚುಚ್ಚಲು ಹೋದಾಗ ತಮ್ಮ ಕಣ್ಣು ಸಹ ನೋಡಿಕೊಳ್ಳಬೇಕು ಎಂದರು.
ರಾತ್ರಿ ಕಂಡ ಬಾವಿಗೆ ಹಗಲು ಬಿದ್ದರೆಂಬ ಆರೋಪ ವಿಚಾರವಾಗಿ ಮಾತನಾಡುತ್ತಾ, ಒಬ್ಬೊಬ್ಬರು ಒಂದೊಂದು ಕಡೆ ಬೀಳುತ್ತಾರೆ. ರಾಜಕಾರಣದಲ್ಲಿ ಯಾರೂ ವೈರಿಗಳಲ್ಲ, ಗೆಳೆಯರೂ ಅಲ್ಲ. ಪ್ರಾಮಾಣಿಕ, ಅಪ್ರಾಮಾಣಿಕ ಅಂತಲೂ ತಿಳಿಯಬೇಡಿ. ನಾನು 16 ಜನ ಸಿಎಂ, 482 ಮಾಜಿ ಮಂತ್ರಿಗಳನ್ನು ನೋಡಿದ್ದೇನೆ. 1,200 ತೀರಿ ಹೋದ ಎಂಎಲ್‌ಎಗಳನ್ನು ನೋಡಿದ್ದೇನೆ. ವಿಧಾನಸೌಧದ ಮೂಲೆಮೂಲೆಯ ಕಲ್ಲುಗಳು ಗೊತ್ತು. ಆದರೆ ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಲು ಆಗಲ್ಲ. ಎಲ್ಲವನ್ನು ಸುಧಾರಣೆ ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಶಿಕ್ಷಕರ ಜೆಡಿಎಸ್ ಮತಗಳೇ ಇಲ್ಲ. ಹಿಂದೆ ಪಡೆದ ಏಳು ಸಾವಿರ ಮತಗಳು ನನ್ನದೇ. ಆ ಮತಗಳು ನಾನು ಎಲ್ಲಿ ಇರುವೆನೋ ಅಲ್ಲಿಗೆ ಬರುತ್ತವೆ. ಪಾಪ ಕುಮಾರ ಸ್ವಾಮಿಯವರಿಗೆ ಫೋನ್ ಮಾಡಿ ಕೆಲವರು ಹೇಳಿದ್ದಾರೆ. ಕಳೆದ ಸಲ ಹೊರಟ್ಟಿ ಜೆಡಿಎಸ್‌ನಲ್ಲಿದ್ದರು, ಈಗ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಯೇ ಮತ ನೀಡುತ್ತೇವೆ ಎಂದಿದ್ದಾರೆ ಎಂದರು.
ಹೊರಟ್ಟಿ ಬಿಜೆಪಿ ಸೇರ್ಪಡೆಯಿಂದ ಹಿಂದುಳಿದ ಸಮಾಜದ ವೋಟ್‌ಗೆ ಕತ್ತರಿ ಬೀಳುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅದೇನಾಗುತ್ತೋ ನೋಡೋಣ. ಬೇಕಾದರೆ ಅಲ್ಪಸಂಖ್ಯಾತರನ್ನೇ ಕರೆದುಕೊಂಡು ಬಂದು ಭೇಟಿ ಮಾಡಿಸುತ್ತೇನೆ. ನಾನು ಎಲ್ಲರನ್ನೂ ಸಂರಕ್ಷಣೆ ಮಾಡುತ್ತಾ ಬಂದಿದ್ದೇನೆ. ಹೀಗಾಗಿ ಯಾವ ಪಕ್ಷಕ್ಕೆ ಹೋದರೂ ಮತ ನೀಡುತ್ತೇವೆ ಎಂದಿದ್ದಾರೆ. ನಿಮ್ಮನ್ನು ನೋಡುತ್ತೇವೆ ಹೊರತು ಪಕ್ಷ ನೋಡೊಲ್ಲ ಎಂದು ಅಲ್ಪಸಂಖ್ಯಾತರು ಹೇಳಿದ್ದಾರೆ. ಏಳು ಜನ ಫಾದರ್‌ಗಳು ಪ್ರಮಾಣ ಮಾಡಿ ಹೇಳಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ:ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ