ಧಾರವಾಡ:ಆತ್ಮಹತ್ಯೆ ಎಂದು ಮುಚ್ಚಿ ಹೋಗಿದ್ದ ಪ್ರಕರಣವೊಂದು ಕೊಲೆಯೆಂದು ಸಾಬೀತಾಗಿ ಆರೋಪಿಗಳಿಬ್ಬನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಕೊಲೆ ಮಾಡಿ ಆತ್ಮಹತ್ಯೆ ಕಂಪ್ಲೆಂಟ್ ಕೊಟ್ರು, ವರ್ಷವಾದ ಮೇಲೆ ತಗಲಾಕೊಂಡ್ರು! - ಧಾರವಾಡ ಉಪ ನಗರ ಠಾಣೆ
ಸರಿ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಭೇದಿಸಿರುವ ಪೊಲೀಸರು ಇದೊಂದು ಕೊಲೆ ಎಂದು ಪತ್ತೆ ಹಚ್ಚಿದ್ದಾರೆ. ಸದ್ಯ ಧಾರವಾಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.
ಕಮಲಾಪೂರ ಜೋಗತ್ಯಾರಬಾವಿಯಲ್ಲಿ 2018ರ ಅಕ್ಟೋಬರ್ 14 ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತಾಯಿ ಮತ್ತು ಮಗ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು. ಇದು ಆತ್ಮಹತ್ಯೆ ಪ್ರಕರಣ ಎಂದು ಉಪ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರದಲ್ಲಿ ಶಾಂತವ್ವಳ ಸಾವಿನಲ್ಲಿ ಸಂಶಯವಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬೆಳಕಿಗೆ ಬಂದಿದೆ.
ವೈಯಕ್ತಿಕ ದ್ವೇಷದಿಂದ ಕಮಲಾಪುರದ ಶಾಂತವ್ವನನ್ನು ಜಾನಾಬಾಯಿ ಗುರ್ಲಹೊಸೂರು (50) ಹಾಗೂ ಆಕೆಯ ಪುತ್ರ ಸದಾನಂದ ಗುರ್ಲಹೊಸೂರು (20) ಕತ್ತು ಹಿಸುಕಿ ಕೊಲೆ ಮಾಡಿ ನಂತರ ಬಾವಿಯಲ್ಲಿ ಎಸೆದು ತಾವೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.