ಅಣ್ಣಿಗೇರಿ(ಧಾರವಾಡ) : ಒಂದು ಮನೆಗೆ ಸಾಮಾನ್ಯವಾಗಿ 2 ಬಾಗಿಲುಗಳು ಇರುತ್ತವೆ. ಹೆಚ್ಚೆಂದರೆ 3 ಅಥವಾ 4 ಬಾಗಿಲುಗಳು ಇರುತ್ತವೆ. ಆದರೆ ಇಲ್ಲೊಂದು ಮನೆಗೆ 101 ಬಾಗಿಲು ಇವೆ. ಈ ವಿಚಾರ ಕೇಳಲು ಆಶ್ಚರ್ಯವಾದರೂ ಇದು ನಿಜ.
ಹಲವು ವಿಶೇಷತೆಗಳನ್ನು ಹೊಂದಿದ ವಾಡೆ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದೇಸಾಯಿ ಎಂಬುವರಿಗೆ ಸೇರಿದ ಈ ವಾಡೆ (ಮನೆ) ಹಲವು ವಿಶೇಷತೆಗಳನ್ನು ಹೊಂದಿದೆ. ಈ ವಾಡೆಯಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಮನೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿದರೆ ಅದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತೆ ಅನ್ನೋದು ಸಿನಿಮಾ ಮಂದಿಯ ನಂಬಿಕೆ. ಅಲ್ಲದೆ ಉತ್ತರ ಕರ್ನಾಟಕದ ಎಲ್ಲಾ ವಾಡೆಗಳಿಗಿಂತ ಇದು ತನ್ನ ಬಾಗಿಲು ಗಳಿಂದಲೇ ಹೆಚ್ಚು ಆಕರ್ಷಣಿಯವಾಗಿದೆ. ಈ ಬೃಹತ್ ಮನೆಗೆ 101 ಬಾಗಿಲುಗಳಿವೆ.
ಬ್ರಿಟಿಷರ ಆಳ್ವಿಕೆಗೂ ಮುನ್ನವೇ ಕಟ್ಟಲಾದ ವಾಡೆ
ಬ್ರಿಟಿಷರ ಆಳ್ವಿಕೆ ಮುನ್ನವೇ ಉತ್ತರ ಕರ್ನಾಟಕದ ಬಹುಭಾಗವನ್ನು ಅಲ್ಲಿನ ದೇಸಾಯಿ ಮನೆತನಗಳೇ ಆಳ್ವಿಕೆ ನಡೆಸುತ್ತಿದ್ದರು. ಅದರಲ್ಲೂ ಸುತ್ತ ಮುತ್ತಲಿನ ಹಳ್ಳಿಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ದೇಸಾಯಿ ಮನೆತನದವರೇ ರಾಜರಾಗಿದ್ದರು. ಅಂತಹ ಮನೆತನಗಳು ಇಂದಿಗೂ ಇದ್ದು, ಅವರು ನಿರ್ಮಿಸಿದ ನೂರಾರು ವರ್ಷಗಳ ಮನೆಗಳು ಈಗಲೂ ವಾಸಸ್ಥಳಕ್ಕೆ ಯೋಗ್ಯವಾಗಿವೆ. ಅಣ್ಣಿಗೇರಿಯ ಈ ಬೃಹತ್ ಮನೆ 17 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಅಂದಿನಿಂದ ಇಂದಿನವರೆಗೆ ಮನೆ ಎಲ್ಲಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಅಲ್ಲದೆ ಆಗಿನ ಕಾಲದಲ್ಲಿ ಬಳಸುತ್ತಿದ್ದ ಸುಣ್ಣದ ಗಚ್ಚು, ಕಟ್ಟಿಗೆ, ಕಲ್ಲಿನಿಂದ ಈ ಮನೆ ನಿರ್ಮಾಣವಾಗಿದೆ.
ಮನೆ ಮುಂದೆ ವಿಶಾಲವಾದ ಅಂಗಳವಿದ್ದು, ಕುದುರೆ ಲಾಯ, ಹಸು-ಕರುಗಳನ್ನು ಕಟ್ಟಲು ದೊಡ್ಡ ದೊಡ್ಡ ಕೊಟ್ಟಿಗೆಗಳಿವೆ. ಇನ್ನು ವಾಡೆ ಒಳಗೆ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಹಾಲ್, ಅಡುಗೆ ಮನೆ, 4 ರಾಜಾಂಗಣ, ಕಾರುಬಾರು ಕೊಠಡಿ, ವಾಡೆಯ ಯಜಮಾನರು, ಪರಿವಾರದವರು ಉಳಿದುಕೊಳ್ಳಲು ದೊಡ್ಡ ದೊಡ್ಡ ಕೋಣೆಗಳಿವೆ. ಇನ್ನು ದಾಖಲೆ ಪತ್ರಗಳನ್ನು ಇಡಲು ಕೂಡಾ ಒಂದು ಕೊಠಡಿ ಇದ್ದು, ಮೇಲಿನ ಮಹಡಿಗೆ ಹೋಗಲು 4 ಕಡೆಯಲ್ಲೂ ಮರದ ಮೆಟ್ಟಿಲುಗಳಿವೆ. ಎಲ್ಲಾ ಕೋಣೆಯ ಮುಂಭಾಗದಲ್ಲಿ ದೊಡ್ಡ ದೊಡ್ಡ ಕಂಬಗಳು ಇರುವುದು ವಿಶೇಷವಾಗಿದೆ. ಒಂದು ವೇಳೆ ಈ ಮನೆ ಬಗ್ಗೆ ತಿಳಿದವರು ಯಾರೂ ಇಲ್ಲದೆ ಬೇರೆ ಯಾರಾದರೂ ಈ ಮನೆ ಒಳಗೆ ಹೋದರೆ ಹೊರಗೆ ಬರುವುದು ಬಹಳ ಕಷ್ಟ. ಏಕೆಂದರೆ ಯಾವ ಬಾಗಿಲಿನಿಂದ ಹೊರಗೆ ಬರುವುದು ಎಂಬುದೇ ಕನ್ಫ್ಯೂಸ್.
ಇಲ್ಲಿ ಚಿತ್ರೀಕರಣವಾದ 3 ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ
ಇಲ್ಲಿ ಚಿತ್ರೀಕರಣವಾದ ಮೂರು ಸಿನಿಮಾಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿವೆ. ಇದು ಬೃಹತ್ ಮನೆಯಾಗಿರುವುದರಿಂದ ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು 'ಸಂತ ಶಿಶುನಾಳ ಶರೀಫ' ಹಾಗೂ 'ಸಿಂಗಾರೆವ್ವ' ಸಿನಿಮಾಗಳನ್ನು ಇದೇ ಮನೆಯಲ್ಲಿ ಚಿತ್ರೀಕರಿಸಿದ್ದರು. ನಂತರ ಗಿರೀಶ್ ಕಾಸರವಳ್ಳಿ ಈ ಮನೆಯಲ್ಲಿ 'ಕನಸೆಂಬ ಕುದುರೆಯನ್ನೇರಿ' ಎಂಬ ಸಿನಿಮಾವನ್ನು ಶೂಟಿಂಗ್ ಮಾಡಿದ್ದರು. ಈ ಮೂರು ಸಿನಿಮಾಗಳಿಗೂ ರಾಷ್ಟ್ರಪ್ರಶಸ್ತಿ ದೊರೆದಿದೆ.
ಈ ಕಾಲದಲ್ಲಿ ಇಂತ ಮನೆಯನ್ನು ಕಟ್ಟಬೇಕು ಎಂದರೆ ಕೋಟ್ಯಂತರ ರೂಪಾಯಿ ಹಣ ಖರ್ಚು ಆಗುತ್ತದೆ. ಈ ಮನೆತನದವರು ಇದೀಗ ತಮ್ಮ ಸ್ವಂತ ಹಣದಿಂದ ಈ ಮನೆಯನ್ನು ನವೀಕರಣ ಮಾಡಲು ಮುಂದಾಗಿದ್ದಾರೆ. ಈ ಕಾಲದಲ್ಲೂ ಇಂತಹ ಮನೆಗಳು ಇರುವುದು ನಮ್ಮ ಸಂಸ್ಕತಿ ಹಾಗೂ ಮನೆತನದ ಹೆಸರನ್ನು ಉಳಿಸುತ್ತದೆ. ಆದ ಕಾರಣ ಮನೆಯ ನವೀಕರಣ ಮಾಡಲು ಮುಂದಾಗಿದ್ಧೇವೆ ಎನ್ನುವುದು ಈ ಮನೆತನದವರ ಅಭಿಪ್ರಾಯ.
ಒಟ್ಟಿನಲ್ಲಿ ಹಿರಿಯರು ಕಾಲವಾದರೆ ಸಾಕು ಹಣದ ಆಸೆಯಿಂದ ಮನೆ ಮಾರಲು ಮುಂದಾಗುವವರ ನಡುವೆ ಹಿರಿಯರು ಕಟ್ಟಿದ, ಬಾಳಿ ಬದುಕಿದ ಮನೆಯನ್ನು ನವೀಕರಣ ಮಾಡಲು ಮುಂದಾಗಿರುವುದು ನಿಜಕ್ಕೂ ಸಂತೋಷದ ವಿಚಾರ.