ಹುಬ್ಬಳ್ಳಿ:ದಿನನಿತ್ಯದ ಬದುಕಿಗೆ ಆಹಾರ ಎಷ್ಟು ಮುಖ್ಯವೋ ಆ ಆಹಾರ ತಯಾರು ಮಾಡೋದಕ್ಕೆ ಗ್ಯಾಸ್ ಸಿಲಿಂಡರ್ ಅಷ್ಟೇ ಮುಖ್ಯ. ಆದ್ರೆ ಆ ಸಿಲಿಂಡರ್ ವಿತರಣೆ ಮಾಡಬೇಕಾದ ಏಜೆನ್ಸಿಯವರು ಮಾಡಿರೋ ಎಡವಟ್ಟಿನಿಂದಾಗಿ ಇದೀಗ ಗ್ರಾಹಕರು ಬೀದಿಗೆ ಬಂದಿದ್ದಾರೆ. ಏಜೆನ್ಸಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಸಿಲಿಂಡರ್ ತಲುಪಿಸಬೇಕಿದ್ದ ಏಜೆನ್ಸಿಯವರು ತಮ್ಮ ಕಚೇರಿಯನ್ನೇ ಬಂದ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಹುಬ್ಬಳ್ಳಿಯ ಹೊಸೂರು ಬಳಿ ಇರುವ ಹೆಚ್ಪಿ ಗ್ಯಾಸ್ನ ರೇಣುಕಾ ಗ್ಯಾಸ್ ಏಜೆನ್ಸಿಯವರು ಕಳೆದ 2 ತಿಂಗಳಿನಿಂದ ಸಮರ್ಪಕವಾಗಿ ಸಿಲಿಂಡರ್ ವಿತರಿಸದೆ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಇಂದು ಏಜೆನ್ಸಿ ಮುಂದೆ ಖಾಲಿ ಸಿಲಿಂಡರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಮುಂಗಣ ಹಣ ನೀಡದರೂ ಗ್ಯಾಸ್ ಸಿಲಿಂಡರ್ ನೀಡದ ಏಜೆನ್ಸಿ ಕಳೆದ ಎರಡ್ಮೂರು ತಿಂಗಳಿನಿಂದ ಆನ್ಲೈನ್ನಲ್ಲಿ ಮುಂಗಡ ಪಾವತಿ ಮಾಡಿ, ಸಿಲಿಂಡರ್ಗಾಗಿ ಕಾದು ಕಾದು ಸಾರ್ವಜನಿಕರು ಬಸವಳಿದಿದ್ದಾರೆ. ಆದರೆ ಬುಕ್ ಮಾಡಿದ ದಿನದಿಂದ ಏಜೆನ್ಸಿಯವರು ಸಿಲಿಂಡರ್ಗಳನ್ನು ಇಂದು ಅಥವಾ ನಾಳೆ ಕಳುಹಿಸುತ್ತೇವೆ ಎಂದು ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ. ಆದರೆ ಸಿಲಿಂಡರ್ ನೀಡದೆ ಅಂಗಡಿ ಬಂದ್ ಮಾಡಿದ್ದಾರೆ.
ಮೊದಲಿಗೆ ತಾಂತ್ರಿಕ ಸಮಸ್ಯೆಯ ನೆಪಹೇಳಿ ಗ್ರಾಹಕರನ್ನು ವಾಪಾಸು ಕಳುಹಿಸುತ್ತಿದ್ದರು. ಆನ್ಲೈನ್ನಲ್ಲಿ ಹಣ ಪಾವತಿಸಿದ್ದವರು ಹಣ ವಾಪಾಸು ಕೇಳಲು ನಿಂತಾಗ ಅಂಗಡಿಯನ್ನೇ ಬಂದ್ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ಕುರಿತು ಏಜೆನ್ಸಿ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಗ್ರಾಹಕರು ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಲೇಡಿಸ್ ಸರ್ಕಲ್ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ