ಹುಬ್ಬಳ್ಳಿ: ರಸ್ತೆ ಇಕ್ಕೆಲಗಳು ಹಾಗೂ ಫುಟ್ಪಾತ್ನಲ್ಲಿ ನಿಂತ ವಾಹನಗಳನ್ನು ಎತ್ತಂಗಡಿ ಮಾಡಲು ನಗರ ಪೊಲೀಸ್ ಕಮಿಷನರೇಟ್ ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಈ ಟೋಯಿಂಗ್ ವಾಹನಗಳ ಹೆಸರಿನಲ್ಲಿ ಪೊಲೀಸ್ ಇಲಾಖೆ ಅಂಧ ದರ್ಬಾರ್ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ವಾಹನಗಳನ್ನು ಎತ್ತಿಕೊಂಡು ಹೋಗಿ ಹಣ ಪೀಕುವ ಕಾಯಕ ಶುರುವಿಟ್ಟುಕೊಂಡಿದ್ದಾರೆಂದು ಜನರು ಆರೋಪಿಸಿದ್ದಾರೆ.
ಟೋಯಿಂಗ್ ವಾಹನಗಳ ಹೆಸರಿನಲ್ಲಿ ದರ್ಬಾರ್!? ನಗರದಲ್ಲಿ ಸೂಚಿತ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೂ ಕೂಡ ವಾಹನಗಳನ್ನು ಪಿಕ್ ಮಾಡಿಕೊಂಡು ಹೋಗುತ್ತಿದ್ದಾರೆ. ಸಂಚಾರಕ್ಕೆ ಅಡೆತಡೆಯಾಗುವಂತೆ ವಾಹನ ನಿಲುಗಡೆ ಮಾಡಿದರೆ, ವಾಹನ ಹಾಗೂ ಬೈಕ್ ನಂಬರನ್ನು ಮೈಕ್ನಲ್ಲಿ ಕೂಗಿ ಹೇಳಬೇಕು. ವಾಹನ ಮಾಲಿಕರು ಇಲ್ಲದಿದ್ರೆ ವಾಹನ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳನ್ನು ಟೋಯಿಂಗ್ ಮಾಡಿಕೊಂಡು ಹೋಗಿ ದಂಡ ವಸೂಲಿ ಮಾಡಿ ಸಂಚಾರ ನಿಯಮಗಳ ಬಗ್ಗೆ ಸವಾರರಿಗೆ ತಿಳುವಳಿಕೆ ನೀಡಬೇಕು. ಆದ್ರೆ ಯಾವುದೇ ಸೂಚನೆ ನೀಡದೆ ನಿತ್ಯ ನೂರಾರು ವಾಹನಗಳನ್ನು ಪಿಕ್ ಮಾಡಿಕೊಂಡು ಹೋಗಲಾಗುತ್ತಿದೆ. ಪೊಲೀಸರ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಕಷ್ಟು ಬಾರಿ ವಾಹನ ಸವಾರರು ಪೊಲೀಸರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಟೋಯಿಂಗ್ ಮಾಡಿದ ಕಮೀಷನ್ ಹಣವನ್ನು ಪೊಲೀಸರು ಹಾಗೂ ಟೋಯಿಂಗ್ ಕಾರ್ಯಾಚರಣೆ ನಡೆಸುವ ಸಿಬ್ಬಂದಿ ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಮೀಷನರ್ ಅವರು, ಈ ಅಂಧ ದರ್ಬಾರ್ಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.