ಹುಬ್ಬಳ್ಳಿ: ಆಧಾರ್ ಈಗ ಪ್ರಮುಖವಾದ ದಾಖಲೆಯಾಗಿದೆ. ಇದು ಈಗ ನಮ್ಮ ಸಂಗಾತಿಯಂತೆ ಸದಾ ಇರಲೇಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಎಲ್ಲದಕ್ಕೂ ಈಗ ಆಧಾರ್ ಸಂಖ್ಯೆ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಹೀಗಾಗಿ, ಸಾರ್ವಜನಿಕರು ಆಧಾರ್ ಕಾರ್ಡ್ ಮಾಡಿಸಲು ಮತ್ತು ತಿದ್ದುಪಡಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಬರುತ್ತಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಏಜೆಂಟರು ಜನರನ್ನು ದಾರಿ ತಪ್ಪಿಸಿ, ಹಣ ವಸೂಲಿ ಮಾಡುತ್ತಿದ್ದಾರೆ.
ನಗರದ ಹಳೇ ಕೋರ್ಟ್ ಹಿಂಭಾಗದಲ್ಲಿರುವ ಆಧಾರ್ ಸೇವಾ ಕೇಂದ್ರಕ್ಕೆ ಬರುವ ಜನರನ್ನೇ ಟಾರ್ಗೆಟ್ ಮಾಡಿ, ಹೆಚ್ಚಿನ ಹಣ ಪಡೆದು ತಪ್ಪು ಮಾಹಿತಿಗಳನ್ನು ನೀಡಿ ಆಧಾರ್ ಕಾರ್ಡ್ ಮಾಡಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರು ಸಹ ಆದಷ್ಟು ಬೇಗ ಆಧಾರ್ ಕಾರ್ಡ್ ಆದ್ರೆ ಸಾಕು ಎಂಬ ಆಲೋಚನೆಯಲ್ಲಿ ಹೆಚ್ಚಿನ ಹಣ ಕೊಟ್ಟು ಆಧಾರ್ ಮಾಡಿಸಿಕೊಳ್ಳುತ್ತಿದ್ದಾರೆ. ಚಿಟುಗುಪ್ಪಿ ಆಸ್ಪತ್ರೆಯ ಆವರಣ, ಜೈನ್ ಕಾಲೇಜು ಪಕ್ಕದಲ್ಲಿರುವ ಕೆಲ ಏಜೆಂಟ್‌ರಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ ಕೂಡ ಕ್ಯಾರೇ ಎನ್ನುತ್ತಿಲ್ಲವಂತೆ.