ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಸದ್ಯ ಬಹುದಿನಗಳ ಪ್ರಯತ್ನಕ್ಕೆ ಫಲ ದೊರೆತಂತೆ ಕಾಣುತ್ತಿದ್ದು, ಕನಸು ನನಸಾಗುವ ಕಾಲ ಸನಿಹವಾದಂತಿದೆ.
ಉ.ಕ. ಭಾಗದಲ್ಲಿ ಕೈಗಾರಿಕಾಭಿವೃದ್ಧಿ ಮಾಡುವ ಸದುದ್ದೇಶದಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ 'ಇನ್ವೆಸ್ಟ್ ಕರ್ನಾಟಕ ಸಮಾವೇಶ' ಆಯೋಜನೆ ಮಾಡಲಾಗಿತ್ತು. ಸಮಾವೇಶದ ನಂತರ ಈ ಭಾಗದ ಕೈಗಾರಿಕಾ ಸ್ಥಾಪನೆಗೆ ಶುಕ್ರದಸೆ ಪ್ರಾರಂಭವಾಗಿದೆ. ಬೃಹತ್ ಮಟ್ಟದ ಖಾಸಗಿ ಕಂಪನಿಗಳು ದೊಡ್ಡಮಟ್ಟದ ಬಂಡವಾಳ ಹೂಡಲು ಮುಂದೆ ಬಂದಿವೆ.
ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಕಂಪನಿಗಳು ಧಾರವಾಡ ಜಿಲ್ಲೆಗೆ ಆಗಮಿಸುತ್ತಿವೆ. ಈ ಪೈಕಿ 'ಏಕಸ್ ಕಂಪನಿ' ಧಾರವಾಡದ ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಟಿವಿ, ಫ್ರಿಡ್ಜ್ ಬಿಡಿಭಾಗಗಳನ್ನು ತಯಾರಿಸುವ ಘಟಕಗಳನ್ನ ಸ್ಥಾಪನೆ ಮಾಡಲು ಮುಂದಾಗಿದೆ.
ಪಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್(ಎಫ್.ಎಂ. ಸಿಜಿ - ವೇಗವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳು)ಕ್ಲಸ್ಟರ್ ಸ್ಥಾಪನೆ ಕುರಿತು ಉಲ್ಲಾಸ ಕಾಮತ್ ನೇತೃತ್ವದಲ್ಲಿ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಈಗ ಏಕಸ್ ಕಂಪನಿ ಕೂಡ ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸುವ ಕುರಿತು ಪ್ರಸ್ಥಾವನೆ ಸಲ್ಲಿಸಿದೆ.