ಹುಬ್ಬಳ್ಳಿ: ಕಿಲ್ಲರ್ ಕೊರೊನಾದಿಂದ ಜನಸಾಮಾನ್ಯರಿಗೆ ಅದೆಷ್ಟೋ ಸಮಸ್ಯೆ ಎದುರಾಗಿದೆ. ಅಲ್ಲದೆ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿ ವಹಿಸಿರೋ ಫ್ರಂಟ್ ಲೈನ್ ವಾರಿಯರ್ಸ್ ಪೌರಕಾರ್ಮಿಕರು ದಿನನಿತ್ಯ ಅನುಭವಿಸುತ್ತಿರೋ ಸಮಸ್ಯೆಗೆ ಇಲ್ಲೊಬ್ಬ ಕರುಣಾಮಯಿ ಬಾಲಕ ತಾನು ಕೂಡಿಟ್ಟ ಹಣದಿಂದ ಸಹಾಯಹಸ್ತ ಚಾಚಿದ್ದಾನೆ.
ಈತನ ಹೆಸರು ಲಕ್ಷ್ಯ್, ಏಳು ವರ್ಷದ ಪೋರ. ಇಂದು ಆತನ ಜನ್ಮದಿನ. ಈ ಹಿನ್ನೆಲೆ ತಾನೇ ಕೂಡಿಟ್ಟ ಹಣದಿಂದ ಸೈಕಲ್ ಖರೀದಿಸಬೇಕೆಂಬ ಆಸೆ ಹೊತ್ತಿದ್ದ. ಆದರೆ ಕುಡಿಕೆಯಲ್ಲಿ ಕೂಡಿಟ್ಟ ಹಣವನ್ನ ಇದೀಗ ಪೌರಕಾರ್ಮಿಕರ ಸಹಾಯಕ್ಕಾಗಿ ನೀಡಿದ್ದಾನೆ. ಪ್ರತಿ ದಿನ ಬೆಳಗ್ಗೆ ನಗರ ಪ್ರದೇಶವನ್ನ ಸ್ವಚ್ಛಗೊಳಿಸೋ ಪೌರಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿರುವ ಈ ಬಾಲಕ ಪೌರಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆ ಪೌರಕಾರ್ಮಿಕರು ಕೈಯಲ್ಲಿ ಹ್ಯಾಂಡ್ ಗ್ಲೌಸ್ ಇಲ್ಲದೆ, ಸರಿಯಾದ ಮಾಸ್ಕ್ ಧರಿಸದೆ ನಗರ ಸ್ವಚ್ಛತೆಯಲ್ಲಿ ಮುಂದಾಗಿರೋ ದೃಶ್ಯವನ್ನ ಮಾಧ್ಯಮದಲ್ಲಿ ವೀಕ್ಷಿಸಿರೋ ಈ ಬಾಲಕ, ಪೌರಕಾರ್ಮಿಕರಿಗೆ ತಾನು ಕೂಡಿಟ್ಟ ಹಣದಿಂದ ಮಾಸ್ಕ್, ಹ್ಯಾಂಡ್ ಗ್ಲೌಸ್, ಹಾಗೂ ಸ್ಯಾನಿಟೈಸರ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.