ಹುಬ್ಬಳ್ಳಿ: ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ ಲಕ್ಷಾಂತರ ರೂ. ಲಾಭ ಮಾಡಬಹುದು ಎಂದು ನಂಬಿಸಿ ಹುಬ್ಬಳ್ಳಿಯ ಉದ್ಯಮಿಯೊಬ್ಬರಿಗೆ ಬರೋಬ್ಬರಿ 45 ಲಕ್ಷ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಬಿಟ್ ಕಾಯಿನ್ ಧಂದೆ ಕುರಿತು ಪ್ರತಿಕ್ರಿಯೆ ಹುಬ್ಬಳ್ಳಿಯ ತೊರವಿಹಕ್ಕಲ ನಿವಾಸಿ ವಾಸಪ್ಪ ಲೋಕಪ್ಪ ಎನ್ನುವರು ಬಿಟ್ ಕಾಯಿನ್ ಧಂದೆಯಿಂದ ಬರೋಬ್ಬರಿ 45 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೆಹಲಿ ಮೂಲದ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್ ಸೇರಿದಂತೆ ಐವರು ಸೈಬರ್ ಖದೀಮರು ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸ್ಥಳೀಯ ವ್ಯಕ್ತಿ ಚೇತನ್ ಪಾಟೀಲ್ ಎನ್ನುವ ಏಜೆಂಟ್ವೊಬ್ಬರನ್ನು ಪರಿಚಯ ಮಾಡಿಕೊಂಡು ಅವಳಿ ನಗರದ ಪ್ರಸಿದ್ಧ ಉದ್ಯಮಿಗಳನ್ನು ಹೋಟೆಲ್ಗಳಿಗೆ ಕರೆಸಿಕೊಂಡು ಬಿಟ್ ಕಾಯಿನ್ ಮೇಲೆ ಹಣ ಹೂಡುವಂತೆ ಬ್ರೈನ್ ವಾಶ್ ಮಾಡುತ್ತಿದ್ದರಂತೆ. ಇವರ ಮಾತುಗಳನ್ನು ನಂಬಿದ್ದ ಉದ್ಯಮಿ ವಾಸಪ್ಪ ಲೋಕಪ್ಪ 45 ಲಕ್ಷ ಕೊಟ್ಟು ಬಿಟ್ ಕಾಯಿನ್ ಖರೀದಿ ಮಾಡಿದ್ದಾರೆ. ಆದ್ರೆ ಈಗ ಇತ್ತ ಕಾಯಿನ್ ಇಲ್ಲದೇ ಅತ್ತ ತಮ್ಮ ಹಣವೂ ಇಲ್ಲದೇ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ 10 ಕೋಟಿಗೂ ಅಧಿಕ ಹಣ ಪಂಗನಾಮ ಆಗಿದೆ. ಸದ್ಯಕ್ಕೆ ನಾನೊಬ್ಬ ದೂರು ನೀಡಿದ್ದೇನೆ. ನನ್ನ ಹಾಗೆ ಮೋಸ ಹೋದವರು 40 ರಿಂದ 50 ಜನ ಇದ್ದಾರೆ. ಅವರೆಲ್ಲಾ ದೂರು ನೀಡಬಹುದು ಎಂದು ವಾಸಪ್ಪ ಲೋಕಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಮರಿಪೇಟೆ ಪೊಲೀಸರು ಹುಬ್ಬಳ್ಳಿಯ ಏಜೆಂಟ್ ಚೇತನ್ ಪಾಟೀಲ್ ಸೆರೆಗೆ ಬಲೆ ಬೀಸಿದ್ದಾರೆ. ದೆಹಲಿ ಮೂಲದ ಅಮಿತ್ ವಿರುದ್ಧ ಈಗಾಗಲೇ ದೇಶದ ನಾನಾ ಕಡೆಗಳಲ್ಲಿ ಸಾಕಷ್ಟು ಪ್ರಕರಣ ದಾಖಲಾಗಿವೆ.