ಹುಬ್ಬಳ್ಳಿ:ಪರಿಸರ ಅಂದರೆ ನೆನಪಿಗೆ ಬರುವುದೇ ಸಾಲು ಮರದ ತಿಮ್ಮಕ್ಕ. ಇನ್ನು ಪರಿಸರ ಅಂದರೆ ಕೆಲವರಿಗೆ ವಿಶ್ವ ಪರಿಸರ ದಿನಾಚರಣೆ ದಿನ ಗಿಡ ನೆಡುವುದು ಎಂಬಂತೆ ಭಾಸವಾಗುತ್ತಿದೆ. ಆದರೆ ಹುಬ್ಬಳ್ಳಿಯ 90 ವರ್ಷದ ಮಲ್ಲಮ್ಮ ಸೋಮಪ್ಪ ವಾಲ್ಮೀಕಿ ಎಂಬ ಅಜ್ಜಿಯು ಸದ್ದಿಲ್ಲದೇ ಪರಿಸರ ಕಾಳಜಿ ತೋರುತ್ತಿದ್ದಾರೆ.
ಪತಿಯೊಂದಿಗೆ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಜ್ಜಿ ಕಾಂಕ್ರೀಟ್ ಕಾಡಿನ ಮಧ್ಯೆ ತಮ್ಮದೇ ಆದ ಮಿನಿ ಕಾಡಿನ ವಾತಾವರಣ ನಿರ್ಮಿಸಿಕೊಂಡು ಸ್ವಚ್ಛಂದ ಗಾಳಿ ಪಡೆಯುತ್ತಿದ್ದಾರೆ. ಹುಬ್ಬಳ್ಳಿಯ ರಾಜೀವ್ ನಗರದಲ್ಲಿ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಹಚ್ಚು ಹಸಿರು, ತಂಪಾದ ವಾತಾವರಣವನ್ನಾಗಿ ಸೃಷ್ಟಿಸಿದ್ದಾರೆ.
ಹುಬ್ಬಳ್ಳಿ ಮಲ್ಲಮ್ಮನ ಅರಣ್ಯ ಪ್ರೇಮ ಅರಣ್ಯ ರಕ್ಷಕ, ಅಧಿಕಾರಿಯಾಗಿದ್ದ ಪತಿ ಸೋಮಪ್ಪ ಅವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ನಾನಾ ಅರಣ್ಯ ಪ್ರದೇಶದಲ್ಲಿ ಸೇವಾ ನಿವೃತ್ತಿ ಬಳಿಕ ಬಿಲ್ಡಿಂಗ್ ಮಧ್ಯೆ ಬದುಕು ಸಾಗಿಸುವುದು ಉಸಿರುಕಟ್ಟಿದಂತೆ ಅನಿಸತೊಡಗಿತ್ತು. ಆಗ ಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಆರಂಭಿಸಿದರು. ಇಳಿ ವಯಸ್ಸಿನಲ್ಲಿ ತಾವು ನೆಟ್ಟ ಸಸಿಗಳನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಅಜ್ಜಿಯ ಮನೆ ಬಳಿ ಸಾಗಿದರೆ ಹಲವಾರು ಗಿಡಗಳು ಸ್ವಾಗತಿಸುತ್ತವೆ. ಅಡಕೆ, ಅರಳಿ ಮರ, ನಾನಾ ಜಾತಿಯ ಮಾವಿನ ಮರಗಳು, ಕಾಡಿನಲ್ಲಿ ಬೆಳೆಯುವ ಹಲಸಿನ ಮರಗಳು, ಏಲಕ್ಕಿ ಗಿಡಗಳು, ಬಾದಾಮಿ ಗಿಡಗಳು, ಬನ್ನಿ ಮರ, ಬೇವಿನ ಗಿಡಗಳು, ಗೊಬ್ಬರ ಗಿಡಗಳು, ತೆಂಗಿನ ಮರ ಸೇರಿದಂತೆ ನಾನಾ ಬಗೆಯ ಹೂ ಗಿಡಗಳು ಕಾಣ ಸಿಗುತ್ತವೆ.
ಇನ್ನು ಈ ಕಾರ್ಯಕ್ಕೆ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು ಸಾಥ್ ನೀಡುತ್ತಿದ್ದಾರೆ. ಶುದ್ಧ ಆಕ್ಸಿಜನ್ಗಾಗಿ ಈಗ ಹಾಹಾಕಾರವಿದೆ. ಅದರ ನಡುವೇ ಅಜ್ಜಿ ಇಡೀ ಆಮ್ಲಜನಕದ ಕಾರ್ಖಾನೆಯನ್ನೇ ತನ್ನ ಮನೆಯ ಸುತ್ತ ನಿರ್ಮಿಸಿಕೊಂಡಿದ್ದಾರೆ. ಈ ಇಳಿವಯಸ್ಸಿನ ಅಜ್ಜಿಯ ಪರಿಸರ ಕಾಳಜಿ ಇತರರಿಗೂ ಮಾದರಿಯಾಗಿದೆ.