ಹುಬ್ಬಳ್ಳಿ: ಆನ್‌ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಆರೋಪ ಪ್ರತ್ಯಾರೋಪಗಳಿವೆ. ಆನ್‌ಲೈನ್ ಶಿಕ್ಷಣ ಕೈಗೆಟುಕದೆ ಕಂಗಾಲಾದ ಬಾಲಕನೊಬ್ಬ ತಾನು ಮಾಡಿದ ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪ್ರಯಾಣಿಸಿ ಬಂದಿರುವ ಅಚ್ಚರಿಯ ಘಟನೆ ನಡೆದಿದೆ.
ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ ಕ್ರಮಿಸಿದ 8 ವರ್ಷದ ಬಾಲಕ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್
ಶಿಕ್ಷಕಿಗೆ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿ ಬಂದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ಯರಿಬುದಿಹಾಳ ಗ್ರಾಮದ 8 ವರ್ಷದ ಪವನ್ ಕಂಠಿ ಎಂಬ ಬಾಲಕನ ತಂದೆ-ತಾಯಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ತಮ್ಮ ಮಗನನ್ನು ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ವಿದ್ಯಾಭ್ಯಾಸ ನೀಡುತ್ತಿದ್ದರು. ಕೊರೊನಾ ಹಿನ್ನೆಲೆ, ಸದ್ಯ ಶಾಲೆಗಳು ಬಂದ್ ಆಗಿವೆ. ಹೀಗಾಗಿ ಪವನ್ ಕಂಠಿ, ಊರಿಗೆ ತೆರಳಿ ತಾಯಿ-ತಂದೆ ಜೊತೆ ವಾಸವಾಗಿದ್ದ.
ಕಳೆದ ತಿಂಗಳು ತಾಯಿ ಜೊತೆ ಶಾಲೆಗೆ ಬಂದು ತನ್ನ ಶಿಕ್ಷಕಿಯನ್ನು ಭೇಟಿಯಾಗಿದ್ದ. ಆಗ ಶಿಕ್ಷಕಿ ಅನುಸೂಯಾ ಸಜ್ಜನ್, ಒಂದು ತಿಂಗಳಿಗಾಗುವಷ್ಟು ಹೋಂ ವರ್ಕ್ ನೀಡಿದ್ದರಂತೆ. ಸದ್ಯ ಹೋಂ ವರ್ಕ್ ಮುಗಿಸಿರುವ ಪವನ್, ಅದನ್ನು ಶಿಕ್ಷಕಿಗೆ ತೋರಿಸಲು 35 ಕಿಲೋ ಮೀಟರ್ ಪ್ರಯಾಣಿಸಿ ಹುಬ್ಬಳ್ಳಿಗೆ ಬಂದಿದ್ದಾನೆ.
ಬಾಲಕನ ಶಿಕ್ಷಣದ ಮೇಲಿನ ಆಸಕ್ತಿ ಕಂಡು ಆತನ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಕ್ಲಾಸ್ಗೆ ಸೌಲಭ್ಯವಿಲ್ಲದ ಕಾರಣ, ಹೋಂ ವರ್ಕ್ ನೀಡಲಾಗಿತ್ತು. ಇದೀಗ ಶಿಕ್ಷಕಿ ಅನುಸೂಯಾ ಸಜ್ಜನ್ ಮತ್ತೆ ಹೋಂ ವರ್ಕ್ ಜೊತೆಗೆ ನೋಟ್ ಬುಕ್, ಪುಸ್ತಕ ನೀಡಿ ಬಾಲಕನನ್ನು ಕಳುಹಿಸಿ ಕೊಟ್ಟಿದ್ದಾರೆ.