ದಾವಣಗೆರೆ :ಜಿಲ್ಲೆಯಿಂದ ಆರು ಬಿಜೆಪಿ ಶಾಸಕರು ಆರಿಸಿ ಬಂದಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಗೆಲ್ಲಿಸಿದ್ದಕ್ಕೆ ಜಿಲ್ಲೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ಚೆಂಬು ನೀಡಿದ್ದಾರೆ ಎಂದು ಶಾಸಕರ ಬೆಂಬಲಿಗರು ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದ ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೈತಪ್ಪಿದೆ.2006ರಿಂದ 2013ರವರೆಗೆ ಸತತ ಏಳು ವರ್ಷಗಳ ಕಾಲ ಸಚಿವರಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಂ ಪಿ ರವೀಂದ್ರನಾಥ್ ಸಂಘ ಪರಿವಾರದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.
2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ರೇಣುಕಾಚಾರ್ಯ ಮೂರುವರೆ ವರ್ಷಗಳ ಕಾಲ ಅಬಕಾರಿ ಸಚಿವರಾಗಿದ್ದರು. ಆದ್ರೀಗ ಜಿಲ್ಲೆಯಲ್ಲಿ ಆರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಚನ್ನಗಿರಿ ಎಂಎಲ್ಎ ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್ ವಿ ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅವರಿಗೂ ನಿರಾಸೆಯಾಗಿದೆ.ಜಿಲ್ಲೆಯ 8ರಲ್ಲಿ 6 ಸ್ಥಾನ ಗೆಲ್ಲಿಸಿದ್ದಕ್ಕೆ ಬಿಜೆಪಿ ಹೈಕಮಾಂಡ್ ಕೊಟ್ಟದ್ದು ಚೊಂಬು. ಲಿಂಗಾಯತ ಸಮುದಾಯದ ರವೀಂದ್ರನಾಥರಿಗೆ ಮಂತ್ರಿಗಿರಿ ನೀಡದೆ ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ.
ಮ್ಯಾಂಚೆಸ್ಟರ್ ಸಿಟಿ ಎಂದೇ ಕರೆಯಲ್ಪಡುವ ಬೆಣ್ಣೆನಗರಿಗೆ ಬಿಜೆಪಿ ಹೈಕಮಾಂಡ್ ಬೆಣ್ಣೆ ಹಚ್ಚುವುದನ್ನು ಬಿಟ್ಟು ಜಿಲ್ಲೆಯಲ್ಲಿ ಒಬ್ಬ ಶಾಸಕನಿಗಾದರೂ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.