ದಾವಣಗೆರೆ :ಜಿಲ್ಲೆಯ ಜಗಳೂರು ತಾಲ್ಲೂಕಿನ ಯರಲಗಟ್ಟೆ ಗ್ರಾಮದ ಕೂಗಳತೆಯಲ್ಲಿರುವ ರಸ್ತೆ ಕಾಮಗಾರಿ ನೋಡಿದರೆ ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ 40% ಕಮಿಷನ್ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗುತ್ತಿದೆ. ಯರಲಕಟ್ಟೆ ಗ್ರಾಮದಿಂದ ಗುರುಸಿದ್ದಪುರ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದಕ್ಕೆ ಕಳೆದ 25 ದಿನಗಳ ಹಿಂದಷ್ಟೇ ಶಾಸಕರ ಅನುದಾನದಲ್ಲಿ 1 ಕೋಟಿ 80 ಲಕ್ಷ ಹಣ ಖರ್ಚು ಮಾಡಿ ಮೂರು ಕಿಲೋಮೀಟರ್ ಡಾಂಬರು ರಸ್ತೆ ಮಾಡಿದ್ದಾರೆ.
ಕಾಮಗಾರಿ ಮಾಡಿದ 15 ದಿನಕ್ಕೆ ರಸ್ತೆ ಸಂಪೂರ್ಣ ಹಾಳಾಗಿದೆ. ಕಳಪೆ ಕಾಮಗಾರಿ ವಿರುದ್ಧ ಯರಲಗಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಂಬರು ರಸ್ತೆಯನ್ನು ಇಲ್ಲಿನ ಜನರು ಹಂಚಿನ ಮೇಲಿನ ರೊಟ್ಟಿಯ ರೀತಿ ಕೈಯಿಂದಲೇ ತೆಗೆಯುತ್ತಿದ್ದಾರೆ. ಚಂದ್ರಪ್ಪ ಮರಿಕುಂಟೆ ಎನ್ನುವ ಗುತ್ತಿಗೆದಾರ ಈ ಕಾಮಗಾರಿ ಮಾಡಿದ್ದು, ಗ್ರಾಮಸ್ಥರು ಈ ಕಳಪೆ ಕಾಮಗಾರಿ ವಿರುದ್ಧ ಪ್ರಶ್ನೆ ಮಾಡಿದ್ರೇ ಗುತ್ತಿಗೆದಾರ ಚಂದ್ರಪ್ಪ ಜೀವ ಬೆದರಿಕೆ ಹಾಕಿದ್ದಾರಂತೆ. ಕೂಡಲೇ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.