ದಾವಣಗೆರೆ: ಸಿಎಂ ಪುತ್ರ ವಿಜಯೇಂದ್ರ ಸಚಿವರ ಪಿಎ ಮೇಲೆ ದೂರು ಕೊಟ್ಟಿಲ್ಲ, ಪರೋಕ್ಷವಾಗಿ ಸಮಾಜ ಕಲ್ಯಾಣ ಸಚಿವ ವಿರುದ್ಧ ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಚಂಬಲ್ ಕಣಿವೆ ಡಕಾಯಿತರಿಗಿಂತ ಕೆಟ್ಟದಾದ ದರೋಡೆ ರಾಜ್ಯದಲ್ಲಿ ನಡೆಯುತ್ತದೆ. ಒಂದೇ ಪಕ್ಷದಲ್ಲಿ ಸಚಿವ ಹಾಗೂ ಸಿಎಂ ಪುತ್ರನ ನಡುವೆ ಮುಸುಕಿನ ಯುದ್ದ ರಾಜ್ಯದಲ್ಲಿ ಕಾಣುತ್ತಿದ್ದೇವೆ. ಇಲ್ಲಿ ಭ್ರಷ್ಟಾಚಾರ ಎಂಬುದು ವ್ಯಾಪಕವಾಗಿದೆ. ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ದೇಶದಲ್ಲಿ ಶೇ.92ರಷ್ಟು ಜನಕ್ಕೆ ಲಸಿಕೆ ಹಾಕಬೇಕಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ 195 ದೇಶಗಳಿಗೆ ನಮ್ಮ ದೇಶದಿಂದ ಲಸಿಕೆ ರಪ್ತು ಆಗಿದೆ. ನಮ್ಮ ದೇಶದ ಜನಕ್ಕೆ ಮಾತ್ರ ಲಸಿಕೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕೋವಿಡ್ ಸಂಕಷ್ಟ ಕಾಲದಲ್ಲಿ ಕೆಲ ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ, ಪ್ಯಾಕೇಜ್ಗಳು ಕೇವಲ ಘೋಷಣೆ ಆಗಿಯೇ ಉಳಿದಿವೆ. ಈ ಎಲ್ಲಾ ಕಾರಣದಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಕೆಆರ್ಎಸ್ ಡ್ಯಾಂಗೆ ಸಂಸದೆ ಸುಮಲತಾರನ್ನು ಅಡ್ಡ ಮಲಗಿಸಬೇಕೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಅವರು ಮಾತಾಡಬಾರದು. ಮಂಡ್ಯ ಸಂಸದರು ಕೆಆರ್ ಎಸ್ ಡ್ಯಾಂ ವಿಚಾರವಾಗಿ ಕೆಲ ಮಾಹಿತಿಯನ್ನ ನೀಡಿದ್ದಾರೆ.
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟ ಬಗ್ಗೆ ಹೇಳಿದ್ದಾರೆ. ಮೇಲಾಗಿ ಮಹಿಳಾ ಸಂಸದೆ, ನಮ್ಮ ದೇಶ ಮಹಿಳೆಯರನ್ನು ಪೂಜೆ ಮಾಡುವ ದೇಶ, ಇಂತಹ ಸದಸ್ಯರ ಬಗ್ಗೆ ಕುಮಾರಸ್ವಾಮಿ ಕೇವಲವಾಗಿ ಮಾತಾಡಬಾರದು, ಅದು ಸರಿಯಲ್ಲ ಎಂದರು.