ದಾವಣಗೆರೆ: ಹಳೇ ದಾವಣಗೆರೆ ಭಾಗದಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರೇ ಹೆಚ್ಚು. ನಿತ್ಯ ಕೂಲಿ ನಾಲಿ ಮಾಡಿ ಜೀವನ ನಡೆಸೋ ಅ ಭಾಗದ ಜನರು ತಪ್ಪು ಸಂದೇಶಗಳಿಗೆ ಕಿವಿ ಕೊಟ್ಟು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಮಾಡಲಾಗಿತ್ತು. ಈ ಹಿನ್ನೆಲೆ, ಅಧಿಕಾರಿಗಳಿಗೆ ಸರ್ಕಾರ ಚಾಟಿ ಬೀಸಿದ ಪರಿಣಾಮ ಡಿಸಿ ಸೇರಿದಂತೆ ಅಧಿಕಾರಿಗಳು ಮಂಡಕ್ಕಿ ಬಟ್ಟಿಗೆ ನುಗ್ಗಿ ಅಲ್ಲಿದ್ದವರಿಗೆ ಲಸಿಕೆ ಹಾಕುವ ಕೆಲಸ ಮಾಡಿದ್ರು.
ದಾವಣಗೆರೆ ನಗರದ ಹಳೇ ದಾವಣಗೆರೆ ಭಾಗದಲ್ಲಿ ಕಡಿಮೆ ವ್ಯಾಕ್ಸಿನೇಷನ್ ಆಗಿದೆ ಎಂದು ಸರ್ಕಾರ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಳೇ ದಾವಣಗೆರೆ ಭಾಗದ ಮಂಡಕ್ಕಿ ಬಟ್ಟಿ ಹಾಗೂ ಅವಲಕ್ಕಿ ಮಿಲ್ಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳದ ಒಂದಿಷ್ಟು ಮಂದಿಗೆ ಲಸಿಕೆ ಹಾಕಿಸಿಯೇ ಬಿಟ್ರು.
ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ತಪ್ಪು ಸಂದೇಶಗಳಿಗೆ ಕಿವಿ ಕೊಟ್ಟಿರುವ ಇಲ್ಲಿನ ಜನ ವಾಕ್ಸಿನ್ನಿಂದ ತಮ್ಮ ಆರೋಗ್ಯಕ್ಕೆ ತೊಂದರೆ ಎಂಬ ಭ್ರಮೆಯಲ್ಲಿದ್ದರು. ಜನರಿಗೆ ಡಿಸಿ ಮಹಾಂತೇಶ್ ಬೀಳಗಿ ಸಮಜಾಯಿಷಿ ನೀಡಿ, ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿ, ಕೊನೆಗೂ ಲಸಿಕೆ ಹಾಕಿಸಿದ್ರು.
ಇದನ್ನೂ ಓದಿ:ಕೋವಿಡ್ ಸೋಂಕಿನಂತೆ ಸುಲಭವಾಗಿ ಪತ್ತೆಯಾಗಲ್ಲ ಈ ಒಮಿಕ್ರಾನ್..
ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಹೇಳಿದವರ ಮೊಬೈಲ್ ಹಾಗೂ ಲಸಿಕೆ ಪಡೆದ ಸಂದೇಶವನ್ನು ಪರಿಶೀಲಿಸಿದರು. ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದವರಿಗೆ ಸ್ಥಳದಲ್ಲೇ ಲಸಿಕೆ ಹಾಕಲಾಯಿತು. ಸದ್ಯ ದಾವಣಗೆರೆಯಲ್ಲಿ ಒಟ್ಟು ಶೇ. 96ರಷ್ಟು ಜನರಿಗೆ ವ್ಯಾಕ್ಸಿನ್ ಹಾಕಲಾಗಿದ್ದು, ಅದನ್ನು 100ಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅಂತವರ ಮನವೊಲಿಸಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭರವಸೆ ನೀಡಿದರು.