ದಾವಣಗೆರೆ : ಸ್ವಾತಂತ್ರ್ಯ ಬಂದು 75 ವರ್ಷಗಳೇ ಗತಿಸಿದರೂ ಕೂಡ ಇನ್ನೂ ಅದೆಷ್ಟೋ ಗ್ರಾಮಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಅತಂಹ ಹಳ್ಳಿಗಳ ಸಾಲಿನಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕ ಕುರಬರಹಳ್ಳಿ ಹಾಗೂ ರೆಡ್ಡಿಹಳ್ಳಿ ಸೇರುತ್ತವೆ. ಈ ಎರಡು ಹಳ್ಳಿಯ ವಿದ್ಯಾರ್ಥಿಗಳು ನೆರೆಯ ಗ್ರಾಮ ಮಲೇ ಕುಂಬಳೂರಿನಲ್ಲಿರುವ ಶಾಲೆಗೆ ತೆರಳಬೇಕಾದರೆ ಪ್ರಾಣವನ್ನ ಒತ್ತೆಯಿಟ್ಟು ಪಯಣಿಸಬೇಕಾದ ಸ್ಥಿತಿ ಎದುರಾಗಿದೆ.
'ಸ್ಮಾರ್ಟ್ ಸಿಟಿ' ದಾವಣಗೆರೆ ಜಿಲ್ಲೆಯ ಎರಡು ಹಳ್ಳಿಗಳಿಲ್ಲ ಬಸ್ ಸೌಲಭ್ಯ ಬಸ್ ಸೌಲಭ್ಯ ಇಲ್ಲದೇ ಈ ಎರಡು ಗ್ರಾಮದಿಂದ ಮೂವತ್ತಕ್ಕೂ ಹೆಚ್ಚು ಮಕ್ಕಳು ಹಾಲಿನ ವಾಹನ ಏರಿ, ಇಲ್ಲವೇ ಎರಡ್ಮೂರು ಕಿಮೀ ನಡೆದುಕೊಂಡು ಶಾಲೆ ಸೇರಬೇಕಾಗಿದೆ. ಒಂದು ವೇಳೆ ಹಾಲಿನ ವಾಹನ ಬರಲಿಲ್ಲ ಎಂದರೆ ಅಂದು ಶಾಲೆಗೆ ಕೆಲ ಮಕ್ಕಳು ಗೈರಾಗುತ್ತಿದ್ದಾರೆ. ಇದರಿಂದ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದ 30 ವರ್ಷಗಳಿಂದ ಈ ಸಮಸ್ಯೆ ಇದ್ದು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಇನ್ನು ಈ ಭಾಗದ ಶಾಸಕ ಪ್ರೋ. ಲಿಂಗಣ್ಣ ಗೆದ್ದು ಹೋದ ಮೇಲೆ ಇತ್ತ ತಲೆ ಹಾಕಿಲ್ಲದಿರುವುದು ಗ್ರಾಮ ನಿವಾಸಿಗಳ ಆಕ್ರೋಶ ಕಾರಣವಾಗಿದೆ.
ಇದಲ್ಲದೇ ಈ ಎರಡು ಗ್ರಾಮದ ವೃದ್ಧರು ವೃದ್ಯಾಪ ವೇತನ ತೆಗೆದುಕೊಳ್ಳಲು ಮಲೇ ಕುಂಬಳೂರಿಗೆ ಹೋಗಲು ಹರಸಾಹಸ ಪಡಬೇಕು. ಬಸ್ ಇಲ್ಲದಿದ್ದರಿಂದ ರಸ್ತೆಯಲ್ಲಿ ಹೋಗುವ ಕಾರು, ಬೈಕ್ಗಳ ಮೊರೆ ಹೋಗುತ್ತಿದ್ದಾರೆ. ಇಲ್ಲದಿದ್ದಲ್ಲಿ ಕಾಲ್ನಡಿಗೆಯೇ ಗತಿ. ಕನಿಷ್ಠ ಖಾಸಗಿ ಬಸ್ಗಳ ಸಂಚಾರ ಕೂಡ ಈ ಹಳ್ಳಿಗಳಿಗಿಲ್ಲ. ಇದರಿಂದ ಅಪಾಯಕಾರಿ ರೀತಿಯಲ್ಲಿ ವಾಹನಗಳಲ್ಲಿ ಸಂಚಾರ ಮಾಡಬೇಕಾದ ಸ್ಥಿತಿ ಇಲ್ಲಿನ ಜನರಿಗೆ ಒದಗಿಬಂದಂತಾಗಿದೆ.
ಒಟ್ಟಾರೆ ಕಳೆದ ಮೂವತ್ತು ವರ್ಷಗಳಿಂದ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಿ ಎಂದು ಜನ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಇತ್ತ ಮಕ್ಕಳು ಹಾಲಿನ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಏಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.