ದಾವಣಗೆರೆ: ಅವರು ಬಳ್ಳಾರಿ ಜಿಲ್ಲೆ ಮೂಲದವರು, ಐವರು ಹೆಣ್ಣು ಮಕ್ಕಳಿಂದ ಕೂಡಿದ್ದ ಸಂಸಾರ, ಅದರೆ 10 ವರ್ಷಗಳ ಹಿಂದೆ ಹಿರಿಯ ಮಗಳ ಕೊಲೆಯಾಗಿತ್ತು. ಇದೀಗ ಮತ್ತಿಬ್ಬರು ಹೆಣ್ಣು ಮಕ್ಕಳೂ ಕೂಡ ಕೊನೆಯುಸಿರೆಳೆದಿದ್ದಾರೆ. ಕರಳಿನ ಕುಡಿಗಳನ್ನು ಕಳೆದುಕೊಂಡಿರುವ ತಾಯಿಯು ಇದೊಂದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ.
ದಾವಣಗೆರೆ ಹೊರವಲಯದಲ್ಲಿರುವ ಆಂಜನೇಯ ಮಿಲ್ನಲ್ಲಿ ಕೆಲಸ ಮಾಡುತ್ತ, ಆಂಜನೇಯ ಮಿಲ್ ಬಡಾವಣೆಯಲ್ಲಿ ಜೀವನ ಸಾಗಿಸುತ್ತಿದ್ದ ಗೌರಮ್ಮ ಹಾಗು ರಾಧಮ್ಮ ಎಂಬಿಬ್ಬರು ಸಹೋದರಿಯರು ಶವವಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆನಕನಹಳ್ಳಿಯ ಹಂಪಮ್ಮ ಎಂಬುವರ ಮಕ್ಕಳಿವರು. ಇವರಲ್ಲಿ ರಾಧಮ್ಮ ತನ್ನ ಗಂಡನಿಗೆ ವಿಚ್ಛೇದನ ನೀಡಿ ಅಕ್ಕ ಗೌರಮ್ಮಳೊಂದಿಗೆ ವಾಸವಿದ್ದಳು. ಗೌರಮ್ಮ ಕೂಡ ಗಂಡ ಮಂಜುನಾಥ್ ಜೊತೆ ಆಗಾಗ ಜಗಳವಾಗುತ್ತಿದ್ದ ಹಿನ್ನೆಲೆ ವಿಚ್ಛೇದನ ನೀಡಬೇಕೆಂದು ನಿರ್ಧರಿಸಿದ್ದಳು. ಆದರೆ ಇನ್ನೂ ವಿಚ್ಛೇದನ ನೀಡಲಾಗಿರಲಿಲ್ಲ.
ಹೀಗೆ ಒಂದೇ ಮನೆಯಲ್ಲಿದ್ದು ಸಹೋದರಿಯರಿಬ್ಬರೂ ಶವವಾಗಿದ್ದು, ಕಳೆದ ಒಂದು ವಾರದ ಹಿಂದೆ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಮನೆಯಿಂದ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಅಕ್ಕ-ತಂಗಿಯರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಜರುಗಿ ಮೂರರಿಂದ ನಾಲ್ಕು ದಿನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.