ದಾವಣಗೆರೆ:ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಎರಡು ಕಾಲಿನ ಮೇಕೆ ಮರಿಗಳು ಜನ್ಮತಾಳಿ ಅಚ್ಚರಿ ಮೂಡಿಸಿವೆ.
ಗ್ರಾಮದ ರೈತ ಕರಡಿ ತೇಳಗೋಟೆಪ್ಪ ಎನ್ನುವರಿಗೆ ಸೇರಿದ ಮೇಕೆಗಾಳಗಿದ್ದು, ಸಾಮಾನ್ಯವಾಗಿ ಯಾವುದೇ ಮೇಕೆಗಳಿಗೆ ನಾಲ್ಕು ಕಾಲುಗಳು ಇರುವುದು ಪ್ರಕೃತಿಯ ನಿಯಮ. ಆದರೆ ಇಲ್ಲಿ ಮಾತ್ರ ವಿಶೇಷವಾಗಿ ಎರಡು ಮೇಕೆಗಳು ಪ್ರತ್ಯೇಕವಾಗಿ ಒಂದೊಂದು ಮರಿಗಳನ್ನು ಹಾಕಿದ್ದು, ಎರಡೂ ಮೇಕೆ ಮರಿಗಳು ಕೂಡ ಎರಡು ಕಾಲನ್ನಷ್ಟೇ ಹೊಂದಿವೆ. ಹೀಗಾಗಿ ನಿಲ್ಲಲು, ನಡೆಯಲು ಮೇಕೆ ಮರಿಗಳು ಪರದಾಡುತ್ತಿವೆ.
ಇನ್ನು ರೈತ ತೇಳಗೋಟೆಪ್ಪ, ಮರಿಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ತಾನೇ ಮರಿಗಳನ್ನು ಕೈಯಲ್ಲಿ ಹಿಡಿದು, ಬಾಟಲಿಯಿಂದ ಹಾಲನ್ನು ಕುಡಿಸುತ್ತಿದ್ದಾನೆ. ಇನ್ನು ಈ ಮರಿಗಳ ಕಾಲು ಸಾಮಾನ್ಯ ಮೇಕೆ ಮರಿಗಳ ಕಾಲಿಗಿಂತ ದೊಡ್ಡದಿವೆ.
ಎರಡು ಕಾಲಿನ ಮೇಕೆ ಮರಿಗಳ ಜನನ ರೈತನ ಬಾಯಿಂದ ಬಂತು ಹೆಮ್ಮೆ ಪಡುವ ಮಾತು...
ಈ ಬಗ್ಗೆ ಮಾತನಾಡಿರುವ ರೈತ ತೇಳಗೋಟೆಪ್ಪ, ನೋಡಿದಾಗ ಇವು ಬದುಕುತ್ತವೆಯೋ ಇಲ್ಲವೋ ಎನ್ನುವ ಭಯ ಕಾಡುತ್ತಿತ್ತು. ಏನೇ ಕಷ್ಟವಾದರೂ ಈ ಮರಿಗಳನ್ನ ಬದುಕಿಸಿಕೊಳ್ಳಬೇಕು ಎನ್ನುವ ಉದ್ದೇಶ ಇದೆ. ಜನರು ಬಂದು ಹೇಗೆ ಸಾಕುತ್ತೀರಿ ಎಂದು ಕೇಳುತ್ತಾರೆ. ಮಕ್ಕಳು ಇದೇ ರೀತಿ ಆಗಿದ್ದರೆ ಸಾಕುತ್ತಿರಲಿಲ್ಲವೇ ಎಂದು ಹೇಳಿ ಕಳುಹಿಸುತ್ತೇನೆ. ಹಾಲು ಕುಡಿಸಿ ಸಣ್ಣ ಮಗುವಂತೆ ಆರೈಕೆ ಮಾಡುತ್ತಿದ್ದೇವೆ. ಏನೇ ಕಷ್ಟವಾದರೂ ಇವನ್ನು ಸಾಕುತ್ತೇವೆ ಎಂದು ರೈತ ತೇಳಗೋಟೆಪ್ಪ ಎಲ್ಲರು ಹೆಮ್ಮೆ ಪಡುವಂತೆ ಹೇಳಿದ್ದಾರೆ.