ದಾವಣಗೆರೆ :ಇತ್ತೀಚೆಗೆ ಮಗುವನ್ನು ಕೊಂದ ಆರೋಪದಲ್ಲಿ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಹಲವಾರು ಟ್ವಿಸ್ಟ್ಗಳು ಈಗ ಸೇರಿಕೊಂಡಿವೆ. ಸಾವನ್ನಪ್ಪಿದ ಮಗುವಿನ ತಾಯಿ ಹುಸ್ನಾ ಬಾನು ವಿರುದ್ಧವೇ ಮಗುವಿನ ದೊಡ್ಡಪ್ಪ ಅರ್ಥಾತ್ ಹುಸ್ನಾಬಾನು ಪತಿಯ ಅಣ್ಣ ಆರೋಪ ಮಾಡಿದ್ದಾರೆ.
ಮಗುವಿನ ತಾಯಿ ಹುಸ್ನಾಬಾನು ತನ್ನ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮಿಲ್ಲತ್ ಕಾಲೋನಿಯ ನಿವಾಸಿಯಾದ ತನ್ನ ಪತಿ ಮನ್ಸೂರ್ ಮತ್ತು ಅತ್ತೆ ಇಬ್ಬರೂ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮೊದಲ ಹೆರಿಗೆಯಲ್ಲೇ ಹೆಣ್ಣು ಹೆತ್ತ ಕಾರಣಕ್ಕೆ ಆಗಾಗ ಕಿರುಕುಳ ನೀಡಿದ್ದರು ಎಂದು ಹುಸ್ನಾ ಬಾನು ಆರೋಪಿಸಿದ್ದಾಳೆ.
ಇದು ಮೂರು ತಿಂಗಳ ಹಿಂದೆ ನಡೆದ ಕರಾಳ ಘಟನೆ. ಇದ್ದಕ್ಕಿದ್ದಂತೆ ಪತ್ನಿ ಹುಸ್ನಾ ಬಾನು ಅವರ ತವರು ಮನೆಗೆ ಆಗಮಿಸಿದ ಪತಿ ಮನ್ಸೂರ್ ಹಾಗೂ ಕುಟುಂಬ ರಾತ್ರಿ 11:30ಕ್ಕೆ ಹುಸ್ನಾಬಾನು ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮತ್ತೆ ಕಿರುಕುಳ ನೀಡಿ ಅತ್ತೆ ಜಬೀನಾ ಹಾಗೂ ಗಂಡ ಮನ್ಸೂರ್ ಇಬ್ಬರೂ ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಎತ್ಹಾಕಿ ಪತ್ನಿ ಹುಸ್ನಾ ಬಾನು ಮುಂದೆಯೇ ಕೊಂದಿದ್ದಾರೆ ಎಂದು ಹುಸ್ನಾ ಬಾನು ಆರೋಪ.
ಹೆಣ್ಣು ಮಗುವನ್ನು ಕೊಂದ ಆರೋಪಕ್ಕೆ ಟ್ವಿಸ್ಟ್ ಇದರ ಜೊತೆಗೆ ಪತಿ ಮನ್ಸೂರ್ಗೆ ಪರಸ್ತ್ರೀಯರ ವ್ಯಾಮೋಹ ಕೂಡಾ ಇದ್ದು, ಇದಕ್ಕೆ ಬುದ್ಧಿವಾದ ಹೇಳಿದ್ದಕ್ಕೆ 'ನೀನೂ ಕೂಡ ಬೇರೆ ಹುಡುಗರ ಸಹವಾಸ ಮಾಡು' ಎಂದು ಮನ್ಸೂರ್ ಚಿತ್ರ ಹಿಂಸೆ ನೀಡುತ್ತಿದ್ದನು ಎಂಬುದು ಹುಸ್ನಾ ಬಾನು ಗಂಭೀರವಾಗಿ ಆರೋಪಿಸಿದ್ದಾಳೆ.
ಕ್ಯಾನ್ಸರ್ನಿಂದ ಸಾವನ್ನಪ್ಪಿದೆ ಎಂದ ಮಗುವಿನ ದೊಡ್ಡಪ್ಪ ಮೈನುದ್ದೀನ್
ರಾತ್ರಿ 11:30ಕ್ಕೆ ಪತ್ನಿ ಹಾಗೂ ಮಗುವನ್ನು ಮನ್ಸೂರ್ ಕರೆತಂದಾಗ ಹುಸ್ನಾ ಬಾನು ಅವರ ಮನೆಯಲ್ಲೇ ಪುಟ್ಟ ಕಂದಮ್ಮಳನ್ನು ಬೀಳಿಸಲಾಗಿತ್ತು. ನಂತರ ನಮ್ಮ ಮನೆಗೆ ಕರೆತರಲಾಗಿತ್ತು ಎಂದು ಮೈನುದ್ದೀನ್ ಆರೋಪಿಸಿದ್ದಾನೆ. ಆದರೆ, ಪೊಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ಮಗುವಿಗೆ ಕ್ಯಾನ್ಸರ್ ಇತ್ತು ಎಂದು ಹೇಳಿಕೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಆರೋಪಿ ಮನ್ಸೂರ್ನ ಅಣ್ಣ ಮೈನುದ್ದೀನ್ ಖುದ್ದು ನ್ಯೂರೋ ಸರ್ಜನ್ ಬಳಿ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಐದಾರು ಲಕ್ಷ ಹಣ ಖರ್ಚು ಮಾಡಿದ್ದರೂ ಕೂಡ ಮಗು ಉಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಇರುವ ಮಗುವನ್ನು ನ್ಯೂರೋ ಸರ್ಜನ್ ಬಳಿ ಏಕೆ ತೋರಿಸಿದರು ಎಂಬ ಅನುಮಾನ ಕಾಡುತ್ತಿದೆ.
ರಾಜಿ ಮಾಡಲು ಕರೆದರೂ ಬಾರದ ಹಿನ್ನೆಲೆ ಥಳಿತ
ಮೂರು ತಿಂಗಳ ಹಿಂದೆ ಮಗು ಸಾವ್ನಪ್ಪಿದ್ದರಿಂದ ತಾಯಿ ಹುಸ್ನಾ ಬಾನು ತನ್ನ ತಂದೆ-ತಾಯಿ ಮನೆ ಸೇರಿದ್ದಳು. ಗಂಡ ಮನ್ಸೂರ್ ಕೂಡ ಹೆಂಡತಿ ಬೇಡ ಎಂದು ತಿಳಿಸಿದ್ದನಂತೆ. ಇತ್ತ ಪತ್ನಿ ಹುಸ್ನಾ ಬಾನು ಮಗು ಸಾವನಪ್ಪಿದ ಬಳಿಕ ಗಂಡನ ಮನೆಗೆ ತೆರಳಲು ಹಿಂದೇಟು ಹಾಕಿದ್ದಾಳೆ.
ಪತಿ-ಪತ್ನಿಯನ್ನು ಒಂದು ಮಾಡಲು ಹುಸ್ನಾ ಬಾನುಳ ಕುಟುಂಬ ಸ್ಥಳೀಯ ಮಸೀದಿ ಕಮಿಟಿ ಬಳಿ ಹೋದರೂ, ಅಲ್ಲಿಗೂ ಮನ್ಸೂರ್ ಬಾರದೆ ಉದ್ಧಟತನ ಮೆರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಹುಸ್ನಾ ಬಾನು ಕುಟುಂಬದವರು ಮನ್ಸೂರ್ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರಂತೆ. ಗಾಯಗೊಳಗಾದ ಮನ್ಸೂರ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅಜಾದ್‌ನಗರ ಪೋಲಿಸ್ ಠಾಣೆಯಲ್ಲಿ ಮನ್ಸೂರ್ ಅಲಿ ಕುಟುಂಬ ದೂರು ನೀಡಿದೆ. ಇತ್ತ ಹುಸ್ನಾ ಬಾನು ತನ್ನ ಮಗುವನ್ನ ಕಳೆದುಕೊಂಡ ದುಃಖದಲ್ಲಿ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಮಹಿಳಾ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾಳೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ರಾಮನಗರದಲ್ಲಿ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ!