ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲೀಗ ಗ್ಲಾಸ್ ಹೌಸ್ ಗಾರ್ಡನ್ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಗಾಜಿನ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆಯ ಗ್ಲಾಸ್ ಹೌಸ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೇಸಿಗೆ ರಜೆ ಹಿನ್ನೆಲೆ ಗ್ಲಾಸ್ ಹೌಸ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕೋವಿಡ್ ಕಾರಣ ಬಂದ್ ಆಗಿದ್ದ ಗಾಜಿನ ಮನೆಯೀಗ ಪ್ರವಾಸಿಗರಿಗಾಗಿ ತೆರೆದಿದೆ. ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 04ರ ಕುಂದವಾಡ ಕೆರೆ ಬಳಿ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಭವ್ಯ ಗಾಜಿನ ಬಂಗಲೆಗೆ ಪ್ರತಿ ತಿಂಗಳು 9 ರಿಂದ 12 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕೋವಿಡ್ನಿಂದಾಗಿ ಬಂದ್ ಆಗಿದ್ದ ಗಾಜಿನ ಮನೆಯನ್ನು ಕಳೆದ ಜುಲೈ ತಿಂಗಳಲ್ಲಿ ತೆರೆದಾಗ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಇದು ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಆತಂಕಕ್ಕೆ ಕಾರಣವಾಗಿತ್ತು. ಅದರೀಗ ಬೇಸಿಗೆ ರಜೆ ಇರುವ ಕಾರಣ ತಿಂಗಳಿಗೆ 13 ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ದೊಡ್ಡವರಿಗೆ 20 ಹಾಗು ಚಿಕ್ಕವರಿಗೆ 10 ರೂಪಾಯಿಯಂತೆ ರಿಯಾಯಿತಿ ದರದಲ್ಲಿ ಟಿಕೆಟ್ ನಿಗದಿ ಮಾಡಿದ್ದು, ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ಸ್ವರ್ಗದಂತಿರುವ ಗಾಜಿನ ಮನೆಯಲ್ಲಿ ಕಾಲ ಕಳೆಯುತ್ತಾರೆ. ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ ಮೂಲದ ಪ್ರವಾಸಿಗರು ಜೊತೆಗೆ ಥೈಲ್ಯಾಂಡ್, ಹಾಗು ಐರ್ಲ್ಯಾಂಡ್ ನಂತಹ ವಿದೇಶಗಳಲ್ಲಿರುವ ಭಾರತೀಯರು ಕೂಡ ಈ ಗಾಜಿನ ಮನೆ ವೀಕ್ಷಿಸಲು ಆಗಮಿಸುತ್ತಿದ್ದಾರೆ.