ದಾವಣಗೆರೆ: ಟೋಲ್ಗಳಲ್ಲಿ ಕೆಲಸ ಮಾಡ್ಬೇಕಂದ್ರೆ ಧೈರ್ಯ, ಬುದ್ಧಿವಂತಿಕೆ ಬೇಕು. ಸದಾ ವಾಹನ ಸವಾರರೊಂದಿಗೆ ಗಲಾಟೆಯಿಂದ ಕೂಡಿದ ಈ ಟೋಲ್ ಕೆಲಸ ಸ್ವಲ್ಪ ಅಪಾಯಕಾರಿಯೇ. ಅದ್ರೆ ಇಲ್ಲೊಬ್ಬ ಕೆಲಸಗಾರ ಮ್ಯಾನೇಜರ್ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 4 ರ ಹೆಬ್ಬಾಳ್ ಟೋಲ್‌ಗೇಟ್ ದಾವಣಗೆರೆ ತಾಲೂಕಿನ ಹಾಲವರ್ತಿ ಗ್ರಾಮದ ನಿವಾಸಿ ಶಿವಮೂರ್ತಿ (26) ರಾಷ್ಟ್ರೀಯ ಹೆದ್ದಾರಿ 4 ರ ಹೆಬ್ಬಾಳ್ ಟೋಲ್ಗೇಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಟೋಲ್ ಗೇಟ್ ಕೆಲಸ ಮಾಡುತ್ತಿದ್ದ ಈ ಯುವಕ ಇದಕ್ಕಿದ್ದಂತೆ ಟೋಲ್‌ಗೇಟ್ ಶೌಚಾಲಯಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಶಿವಮೂರ್ತಿಯನ್ನು ದಾವಣಗೆರೆ ಎಸ್ ಎಸ್ ಆಸ್ಪತ್ರೆ ದಾಖಲಿಸಿದ್ದಾರೆ.
ಮ್ಯಾನೇಜರ್ ನಂದಮೋಹನ್ ಅವರ ಕಿರುಕಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಶಿವಮೂರ್ತಿ ಸಂಬಂಧಿಕರು ಆರೋಪಿಸಿದ್ದಾರೆ. ಇಂದು ಟೋಲ್ ಗೇಟ್ ಬಳಿ ಸೇರಿದ ಹಾಲವರ್ತಿ ಗ್ರಾಮಸ್ಥರು ನಮಗೆ ಪರಿಹಾರ ಬೇಡ, ನಿಮ್ಮ ಕಿರುಕುಳದಿಂದಲೇ ತಮ್ಮ ಹುಡುಗ ವಿಷ ಸೇವಿಸಿದ್ದು, ಕನಿಷ್ಟ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನಾದ್ರು ಭರಿಸಿ ಎಂದು ತಿಳಿಸಿದರು.
ಕಳೆದ ಮೂರು ತಿಂಗಳಿಂದ ಇಲ್ಲಿಗೆ ಮ್ಯಾನೇಜರ್ ಆಗಿ ಆಗಮಿಸಿರುವ ನಂದಮೋಹನ್, ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವವರು ಸ್ವಲ್ಪ ತೂಕಡಿಸಿದರೆ ಅದನ್ನೇ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡು ನಾಳೆಯಿಂದ ಕೆಲಸಕ್ಕೆ ಬರಬೇಡಿ ಎನ್ನುತ್ತಾರಂತೆ. ಕೊರೊನಾ ಸಂಕಷ್ಟದಲ್ಲಿ ಕೆಲಸ ಮಾಡಿದವರು ಹಾಗೂ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಸ್ಥಳೀಯರನ್ನು ಕೆಲಸದಿಂದ ತೆಗೆದು ಹಾಕಿ ಅವರ ರಾಜ್ಯದ ಜನರನ್ನು ಇಲ್ಲಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮ್ಯಾನೇಜರ್ ನಂದಮೋಹನ್, ಚಿಕಿತ್ಸಾ ವೆಚ್ಚ ನೀಡುವುದು, ಬಿಡುವುದು ನಮಗೆ ಗೊತ್ತಿಲ್ಲ. ನಮ್ಮ ಪ್ರಧಾನ ಕಚೇರಿ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.