ದಾವಣಗೆರೆ:ದಾವಣಗೆರೆ ಹೊರವಲಯದ ಡಾಲರ್ಸ್ ಕಾಲೋನಿಯ ಚಂದ್ರಶೇಖರಪ್ಪ ಎಂಬುವವರ ಮನೆಯ ಬಾಗಿಲು ಮುರಿದು 83ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ಪಾರ್ಧಿಗ್ಯಾಂಗ್ ಈಗ ವಿದ್ಯಾನಗರ ಪೊಲೀಸರ ಅತಿಥಿಯಾಗಿದೆ.
ಈ ಗ್ಯಾಂಗ್ನ 7 ಮಂದಿಯ ಪೈಕಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೋಹನ್ ನಾಮದೇವ ಕಾಳೆ, ದಶರಥ ಗಣಪತಿ ಕಾಳೆ, ಲಕ್ಕನ್ ಕಾಳೆ ಬಂಧಿತರು. ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಬಂಧಿತರಿಂದ 253ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.
ಈ ಘಟನೆ ನಡೆದ ದಿನವೇ ಇದೇ ಗ್ಯಾಂಗ್ ಶಾಮನೂರಿನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿತ್ತು. ಈ ಘಟನೆಯಿಂದ ಇಡೀ ದಾವಣಗೆರೆ ನಗರವೇ ಬೆಚ್ಚಿ ಬಿದ್ದಿತ್ತು. ಚಂದ್ರಶೇಖರಪ್ಪ, ಪತ್ನಿ ಚಂದ್ರಕಲಾ ಹಾಗೂ ಮಗನ ಮೇಲೆ ಹಲ್ಲೆ ಮಾಡಿ ಕಟ್ಟಿ ಹಾಕಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ವಾರದಲ್ಲಿ ಆರು ಕಡೆ ಕಳ್ಳತನ ಮಾಡಿತ್ತು. ಬಾಗೇಪಲ್ಲಿಯಲ್ಲಿ ಮನೆಯಲ್ಲಿ ಚಿನ್ನಾಭರಣ ದೋಚಿತ್ತು. ಬಳಿಕ ಮಾಲೀಕನನ್ನು ಕೊಲೆಗೈದು ಪರಾರಿಯಾಗಿತ್ತು. ಆಂಧ್ರದ ಕರ್ನೂಲಿನಲ್ಲಿ, ಕಲಬುರಗಿಯ ಜೇವರ್ಗಿ ತಾಲೂಕಿನಲ್ಲಿ, ಬಳ್ಳಾರಿಯ ಕೂಡ್ಲಿಗಿ ತಾಲೂಕಿನಲ್ಲಿಯೂ ನಗ-ನಾಣ್ಯ ದೋಚಿತ್ತು.
ಮಹರಾಷ್ಟ್ರದ ಉನ್ಮಾನಾಬಾದ್ನ ಪೊಲೀಸರ ಸಹಕಾರ ಪಡೆದ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.