ದಾವಣಗೆರೆ :ಮನೆ ಬೀಗ ಮುರಿದು ಖತರ್ನಾಕ್ ಕಳ್ಳರು ಇಡೀ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಘಟನೆ ಕೆಟಿಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟ್ಟುವಳ್ಳಿ ಲೆನಿನ್ ನಗರದಲ್ಲಿ ನಡೆದಿದೆ. ಮನೆಯಲ್ಲಿದ್ದ 3.76 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು ಪರಾರಿಯಾಗಿದ್ದಾರೆ. ಎರಡ್ಮೂರು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಈ ಕೃತ್ಯ ಎಸಗಿದ್ದು, ದಾವಣಗೆರೆ ನಗರದ ನಿಟ್ಟುವಳ್ಳಿಯ ಲೆನಿನ್ ನಗರ ನಿವಾಸಿಯಾದ ರೇಣುಕಮ್ಮ(46) ಅವರಿಗೆ ಸೇರಿದ ಚಿನ್ನಾಭರಣ ಕಳ್ಳತನವಾಗಿದೆ. ಮನೆ ಮಾಲೀಕರಾದ ರೇಣುಕಮ್ಮ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮಕ್ಕಳೊಂದಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.