ದಾವಣಗೆರೆ:ಬೆಣ್ಣೆನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಲೇ ಇದೆ. ಆದ್ರೆ ಜಿಲ್ಲಾಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಮಾತ್ರ ಗ್ರಹಣ ಬಡಿದಿದೆ ಎನ್ನದೆ ವಿಧಿಯಿಲ್ಲ. ಚಿಗಟೇರಿ ಜಿಲ್ಲಾಸ್ಪತ್ರೆ ತಲೆ ಎತ್ತಿ ವರ್ಷಗಳೇ ಉರುಳಿವೆ. ಆದರೆ ಜನಸಾಮಾನ್ಯರಿಗೆ ಅವಶ್ಯಕವಾಗಿರುವ ಎಂಆರ್ಐ ಸ್ಕ್ಯಾನಿಂಗ್ ಸೆಂಟರ್ ಮಾತ್ರ ಇಲ್ಲಿ ಮರೀಚಿಕೆ.
ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕದ ಕೇಂದ್ರಬಿಂದು. ಇಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಗೆ ನೆರೆಯ ಬಳ್ಳಾರಿ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಬಡವರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಮೆದುಳು ಸಂಬಂಧಿ ರೋಗಗಳನ್ನು ಕಂಡುಹಿಡಿಯಲು ಎಂಆರ್ಐ ಸ್ಕ್ಯಾನಿಂಗ್ ಕೇಂದ್ರ ಅಗತ್ಯವಾಗಿದೆ. ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ಆಸ್ಪತ್ರೆಯ ಆಸುಪಾಸಿನಲ್ಲಿರುವ ಖಾಸಗಿ ಕೇಂದ್ರಗಳಿಗೆ ಬರೆದುಕೊಡುತ್ತಿದ್ದು, ಇಲ್ಲಿ ಸುಮಾರು 9 ಸಾವಿರ ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಿದೆ. ಹಣ ಇಲ್ಲದ ಬಡ ರೋಗಿಗಳು ನೆರೆಯ ಚಿತ್ರದುರ್ಗಕ್ಕೆ ತೆರಳಿ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ.