ದಾವಣಗೆರೆ :ಲಾಕ್ಡೌನ್ ನಡುವೆಯೂ ಮನೆಯಿಂದ ಹೊರ ಬಂದು ಪೊಲೀಸರಿಗೆ ಸಿಕ್ಕಿಬಿದ್ದ ಸವಾರನೋರ್ವ ಬೈಕ್ ಬಿಟ್ಟು ಬಿಡಿ ಸಾರ್ ಎಂದು ಕೈಮುಗಿದು ಕೇಳಿಕೊಂಡಿದ್ದು, ಪ್ರತಿಯಾಗಿ ಪೊಲೀಸರು ಕೂಡ ಕೈ ಮುಗಿದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಇಂದಿನಿಂದ ಲಾಕ್ಡೌನ್ ಆರಂಭವಾಗಿರುವ ಹಿನ್ನೆಲೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಫೀಲ್ಡ್ಗೆ ಇಳಿದ ಪೊಲೀಸರು ದ್ವಿಚಕ್ರ ವಾಹನವೊಂದನ್ನು ತಡೆದಿದ್ದು, ಸವಾರ ಬೈಕ್ ಬಿಡುವಂತೆ ಕೈ ಮುಗಿದು ಬೇಡಿಕೊಂಡನು. ಬಳಿಕ ಪೊಲೀಸರು ನಾನು ಕೂಡ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಮನೆಯಲ್ಲೇ ಸುರಕ್ಷಿತವಾಗಿ ಇರಿ ಎಂದು ಮನವಿ ಮಾಡಿದರು.
ಲಾಕ್ಡೌನ್ ನಡುವೆ ಹೊರಬಂದವರಿಗೆ ಕೈಮುಗಿದು ಕೇಳಿಕೊಂಡ ಪೊಲೀಸರು.. ನಾವು ಅನೌನ್ಸ್ ಮಾಡ್ತೀವಿ, ಮಾಧ್ಯಮಗಳಲ್ಲಿ ತೋರಿಸ್ತಾ ಇದೀವಿ ಮನೆಯಿಂದ ಹೊರ ಬರಬೇಡಿ ಎಂದು, ನಿಮಗೆ ಸಾಮಾಜಿಕ ಬದ್ಧತೆ ಇದ್ಯಾ? ಹೊರ ಬರಬೇಡಿ ಎಂದು ಹೇಳಿದ್ರೂ ಬರ್ತೀರಾ, ಜಿಲ್ಲಾಸ್ಪತ್ರೆ, ಬಾಪೂಜಿ ಹತ್ರ ಹೋಗಿ ನೋಡಿ ಬೆಡ್ ಇಲ್ದೆ ಎಷ್ಟು ಜನ ನರಳಾಡ್ತಿದ್ದಾರೆ. ನಾನು ನಿಮಗೆ ಕೈ ಮುಗಿದು ಕೇಳಿಕೊಳ್ತೀನಿ, ನಿಮ್ಮ ಆರೋಗ್ಯ ಕಾಪಾಡಿ ಎಂದು ಬಡಾವಣೆ ಪಿಎಸ್ಐ ಅರವಿಂದ್, ದ್ವಿಚಕ್ರ ಸವಾರನಿಗೆ ಬುದ್ಧಿಮಾತು ಹೇಳಿದರು.
ಕೆಲವರು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದು, ಅಂಥವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದರು.