ದಾವಣಗೆರೆ:ಯತ್ನಾಳ್ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್ಗಳು ಹಣ ಕೇಳಿದ್ದರು. ನನಗೆ ಅವರು ಗೊತ್ತು, ಇವರು ಗೊತ್ತು ಎಂದು ಹೇಳಿಕೊಂಡು ಬಂದಿದ್ದರು. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನ ಮಾರಾಟಕ್ಕೆ ಇಲ್ಲ ಎಂದು ಹೇಳಿ ಅವರಿಗೆ ನಾನೇ ಛೀಮಾರಿ ಹಾಕಿ ಕಳಿಸಿದ್ದೆ. ಕಾಂಗ್ರೆಸ್ನಲ್ಲಿ ಹಣ ಕೊಟ್ಟು ಬಿ ಫಾರ್ಮ್, ಸಚಿವ ಸ್ಥಾನ ಖರೀದಿ ಮಾಡುತ್ತಾರೆ. ಆದರೆ ಬಿಜೆಪಿಯಲ್ಲಿ ಈ ಸಂಸ್ಕೃತಿ ಇಲ್ಲ ಎಂದು ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಚಾರ್ಯ ಹೊಸ ಬಾಂಬ್ ಸಿಡಿಸಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ. ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಬೆಳೆಸುತ್ತದೆ, ಮಧ್ಯವರ್ತಿಗಳು ಬಂದು ಕೇಳಿದ್ದರು. ಆಗ ಅವರಿಗೆ ಒದ್ದು ಜೈಲಿಗೆ ಹಾಕಿಸ್ತೀನಿ ಎಂದು ಎಚ್ಚರಿಕೆ ನೀಡಿ ಕಳಿಸಿದ್ದೆ. ಜೈಲಿಗೆ ಹೋದ ಯುವರಾಜ್ ನನ್ನ ಧರ್ಮಪತ್ನಿಗೆ ಕಾಲ್ ಮಾಡಿ ನಿಮ್ಮ ಮನೆಯವರಿಗೆ ಸಚಿವ ಸ್ಥಾನ ಕೊಡಿಸುತ್ತೇನೆ ಎಂದು ಹೇಳಿದ್ದ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಫೋಟೋ ತೆಗೆಸಿಕೊಂಡು ನನಗೆ ಅವರು ಗೊತ್ತು ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯವರೇ ಅಲ್ಲದವರು ಈ ರೀತಿ ಕೆಲಸ ಮಾಡುತ್ತಾರೆ ಎಂದರು.