ದಾವಣಗೆರೆ :ಹಿಜಾಬ್ ವಿವಾದದ ನಡುವೆ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ದಾವಣಗೆರೆಯಲ್ಲಿ 22,226 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜಿಲ್ಲೆಯಲ್ಲಿ 90 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷೆ ಕೇಂದ್ರದ 200 ಮೀಟರ್ ನಿಷೇಧಾಜ್ಞೆ ಹಾಕಲಾಗಿದೆ.
ನಗರದ ಸೀತಮ್ಮ ಕಾಲೇಜು ಮುಂಭಾಗ ಬಳಿ ಬಂದ ಮುಸ್ಲಿಂ ಮುಖಂಡರು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಬುದ್ಧಿವಾದ ಹೇಳಿ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ತಿಳಿಸಿದರು. ಯಾವುದೇ ಆತಂಕವಿಲ್ಲದೇ, ಪರೀಕ್ಷೆ ಬರೆಯಿರಿ ಎಂದು ಆತ್ಮಸ್ಥೈರ್ಯ ತುಂಬಿದರು. ಇನ್ನೂ ಕೆಲ ಮುಖಂಡರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಪರೀಕ್ಷೆ ಕೇಂದ್ರಕ್ಕೆ ಕಳುಹಿಸಿದರು.
ಜಿಲ್ಲಾಧಿಕಾರಿ ಭೇಟಿ:ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಪರೀಕ್ಷೆ ಚೆನ್ನಾಗೆ ಬರೆಯುವಂತೆ ಹುರಿದುಂಬಿಸಿದರು. ದಾವಣಗೆರೆ ನಗರದ ಮೋತಿ ವೀರಪ್ಪ, ಸರ್ಕಾರಿ ಬಾಲಕರ ಪ್ರೌಢ ಶಾಲೆ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿ, ಎಷ್ಟು ಮಕ್ಕಳು ಪರೀಕ್ಷೆ ಹಾಜರಾಗಿದ್ದಾರೆ ಎಂಬ ಮಾಹಿತಿ ಪಡೆದುಕೊಂಡರು.