ದಾವಣಗೆರೆ: ಸಂಸದರೊಬ್ಬರು ಶುಗರ್ ಮತ್ತು ಎನರ್ಜಿಗೆ ಸಂಬಂಧಿಸದಂತೆ ಕಾರ್ಖಾನೆ ನಿರ್ಮಾಣಕ್ಕಾಗಿ ಕಲ್ಲು ಗಣಿಗಾರಿಕೆಗೆ ಪರವಾನಗಿ ತೆಗೆದುಕೊಂಡಿದ್ದರು. ನಂತರ, ಅದೇ ಆಧಾರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ (Illegal stone mining)ಯನ್ನು ಆರಂಭಿಸಿದ್ದರು. ಈ ಕುರಿತು ಸಾಮಾಜಿಕ ಕಾಳಜಿಯ ಸಂಸ್ಥೆಯೊಂದು ಸರ್ಕಾರಕ್ಕೆ ದೂರು ಸಲ್ಲಿಸಿತ್ತು.
ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆದ ವೇಳೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೂ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್(G.M.Siddeshwar) ಅವರು ಮಾಡುತ್ತಿದ್ದಾರೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆ (Illegal stone mining) ಬಗ್ಗೆ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ (S.R.Hiremath) ಮಾಹಿತಿ ನೀಡಿದರು.
ದಾವಣಗೆರೆಯ ಸಂಸದ ಸಿದ್ದೇಶ್ವರ್ ಕುಟುಂಬದ ಒಡೆತನದಲ್ಲಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿ ಗ್ರಾಮ ವ್ಯಾಪಿಯಲ್ಲಿ ಜಿ.ಎಂ.ಶುಗರ್ ಅಂಡ್ ಎನರ್ಜಿ ಪೈ.ಲಿ ಎಂಬ ಕಂಪನಿಗೆ 200 ಎಕರೆಗೂ ಹೆಚ್ಚು ಜಮೀನು ಖರೀದಿಸಿದ್ದಾರೆ. ಅಲ್ಲಿ 1.22 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಅನುಮತಿ ಪಡೆದು, ಹತ್ತಾರು ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ಹಾಗು ಕ್ರಶರ್ ದಂಧೆ ನಡೆಸುತ್ತಿದ್ದಾರೆ.