ದಾವಣಗೆರೆ: ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರ ಮಕ್ಕಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವ ವಿಚಾರ ರಾಜ್ಯದಲ್ಲಿ ಇತ್ತೀಚೆಗೆ ಸದ್ದು ಮಾಡಿತ್ತು. ಇದೇ ವಿಚಾರವಾಗಿ ಭೋವಿ ಸಮುದಾಯದ ಮುಖಂಡರು ಶಾಸಕರ ನಡೆ ಖಂಡಿಸಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಾವು ಪರಿಶಿಷ್ಟರು ಸ್ವಾಭಿಮಾನಿಗಳು, ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಿಗೆ ಮದುವೆ ಮಾಡಿಕೊಡುವ ತಾಖತ್ ಇದೆಯಾ? ಎಂದು ಭೋವಿ ಸಮಾಜದ ಮುಖಂಡ ಸೋಮಶೇಖರ್ ಅವರು ಶಾಸಕ ರೇಣುಕಚಾರ್ಯ ಅವರಿಗೆ ಸವಾಲು ಹಾಕಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹಾಗು ಅವರ ಕುಟುಂಬಸ್ಥರು ಬೇಡಜಂಗಮ ಎಸ್ಸಿ ಸರ್ಟಿಫಿಕೇಟ್ ಪಡೆದು ಸರ್ಕಾರಿ ಸೌಲಭ್ಯ ಪಡೆದಿರುವುದನ್ನು ವಿರೋಧಿಸಿ ಜಿಲ್ಲಾ ಭೋವಿ ಸಮಾಜದಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಅಂಬೇಡ್ಕರ್ ಸರ್ಕಲ್ನಿಂದ ಆರಂಭವಾದ ಪ್ರತಿಭಟನೆ ಎಸಿ ಕಚೇರಿಗೆ ತಲುಪಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಮಾತನಾಡಿದ ಭೋವಿ ಸಂಘಟನೆಯ ಮುಖಂಡ ಸೋಮಶೇಖರ್, ನನ್ನ ಮಗಳನ್ನು ನಿಮ್ಮ ಮಗನೊಂದಿಗೆ ಮದುವೆ ಮಾಡಿಸುವ ತಾಖತ್ತು ನಿಮಗಿದೆಯಾ? ಹಾಗೆ ಮಾಡಿದ್ರೆ ನಾನು ವರದಕ್ಷಿಣೆ ಕೊಡಲು ಸಿದ್ಧವೆಂದು ಶಾಸಕ ರೇಣುಕಚಾರ್ಯಗೆ ಸವಾಲು ಹಾಕಿದರು. ಅಲ್ಲದೆ, ನಿಮ್ಮ ಮಗಳನ್ನು ನನ್ನ ಮಗನಿಗೆ ಕೊಡಿ. ನಾನು ಒಂದು ರೂಪಾಯಿ ವರದಕ್ಷಿಣೆ ಪಡೆಯುವುದಿಲ್ಲ. ನಾವು ಪರಿಶಿಷ್ಟರು ಸ್ವಾಭಿಮಾನಿಗಳು, ರೇಣುಕಚಾರ್ಯ ನಿಮ್ಮ ಶಾಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಎಂದು ನಮೂದಿಸಲಾಗಿದೆ ಎಂದು ಸೋಮಶೇಖರ್ ಹರಿಹಾಯ್ದರು.