ದಾವಣಗೆರೆ: ಚಿತ್ರದುರ್ಗ ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಆರೋಪ ಮಾಡಿದ್ದ ಲಿಂಗಾಯತ ಸಮಾಜದ ಮುಖಂಡ ಹಾಗು ಮಾಜಿ ಪರಿಷತ್ ಸದಸ್ಯ ಮುದೇಗೌಡ್ರು ವೀರಭದ್ರಪ್ಪನವರ ಬಣಕ್ಕೆ ಒಂದು ಗತಿ ಕಾಣಿಸುತ್ತೇನೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ ಬಹಿರಂಗವಾಗಿ ಎಚ್ಚರಿಕೆ ನೀಡಿದರು.
ಸಿರಿಗೆರೆ ಪೀಠ ತ್ಯಾಗ ವಿಚಾರ: ಶ್ರೀಗಳ ವಿರೋಧಿ ಬಣಕ್ಕೆ ಬಹಿರಂಗ ಎಚ್ಚರಿಕೆ - mudegowdru veerabhadrappa
ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠತ್ಯಾಗ ಮತ್ತು ಉತ್ತರಾಧಿಕಾರಿ ನೇಮಕಕ್ಕೆ ಆಗ್ರಹಿಸಿದ್ದ ಬಣದ ವಿರುದ್ಧ ಶ್ರೀಗಳ ಬೆಂಬಲಿಗ ಮತ್ತು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ, ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ಪರಿಷತ್ ಸದಸ್ಯ ಮುದೇಗೌಡ್ರು ವೀರಭದ್ರಪ್ಪನವರ ಬಣಕ್ಕೆ ಒಂದು ಗತಿ ಕಾಣಿಸುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸಿರಿಗೆರೆ ಶ್ರೀಗಳ ವಿರುದ್ಧ ಮಾತನಾಡಿದ ಬಣದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಂದೇ ಲಿಂಗಾಯತ ಸಮುದಾಯ ಮುಖಂಡರು ದಾವಣಗೆರೆ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ತುರ್ತು ಸಭೆ ಕರೆದಿದ್ದರು. ಶ್ರೀಗಳ ವಿರುದ್ಧ ಆರೋಪ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಶ್ರೀಗಳ ಹೆಸರಿಗೆ ಕಳಂಕ ತರಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ, ಕೂಡಲೇ ಸಮಾಜದಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಈ ಸಭೆಯಲ್ಲಿ ಸಾದು ಲಿಂಗಾಯತ ಸಮಾಜದ ನೂರಾರು ಜನರು ಭಾಗಿಯಾಗಿ ಆಕ್ರೋಶ ಹೊರಹಾಕಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ, 'ನೀವೆಲ್ಲ ನನ್ನ ಜೊತೆ ಇರಿ, ನಾಳೆನೇ ಅವರಿಗೆ ಒಂದು ಗತಿ ಕಾಣಿಸುತ್ತೇನೆ. ಬಿಟ್ಟುಕೊಂಡು ಹೋದರೆ ಅದು ಹೀಗೆಯೇ ಮುಂದುವರೆಯುತ್ತದೆ. ಎಲ್ಲಾ ಸಮಾಜಗಳು ಒಂದಾಗಿದ್ದಾರೆ. ನಾವೂ ಕೂಡ ಒಂದಾಗಬೇಕು. ಒಬ್ಬರು ಹೊಡೆದರೆ ಕೇಸ್ ಆಗುತ್ತೆ, ನೂರಾರು ಜನರು ಹೊಡೆದರೆ ಹೇಗೆ ಕೇಸ್ ಆಗುತ್ತದೆ?. ನಾವು ಕೂಡಾ ಹಿಂದೆ ಹಲವು ಕೇಸ್‌ಗಳನ್ನು ಎದುರಿಸಿ ಬಂದಿದ್ದೇವೆ. ನೀವೆಲ್ಲಾ ನನ್ನ ಹಿಂದೆ ಇರಿ, ಕಳೆದ ದಿನ ಶ್ರೀಯವರ ವಿರುದ್ಧ ಯಾರು ಮಾತನಾಡಿದ್ದಾರೆ ಅವರಿಗೆ ಒಂದು ಗತಿ ಕಾಣಸುತ್ತೇನೆ' ಎಂದು ಗುಡುಗಿದರು.