ದಾವಣಗೆರೆ:ದಯವೇ ಧರ್ಮದ ಮೂಲವಯ್ಯ, ಧರ್ಮ ಮನುಷ್ಯನಿಗೆ ಇರಬೇಕು, ಧರ್ಮಕ್ಕಾಗಿ ಮನುಷ್ಯರಲ್ಲ, ಧರ್ಮ ಧರ್ಮದ ಮಧ್ಯೆ ಸಂಘರ್ಷ ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಮಠದ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಭಾರತ ದೇಶ ಅನೇಕ ಧರ್ಮ ಜಾತಿ ಪಂಗಡಳಿಂದ ಕೂಡಿದ ದೇಶ. ಯಾವುದೇ ಒಂದು ವರ್ಗ, ಧರ್ಮೀಯರು ಈ ದೇಶದಲ್ಲಿ ಇರುವುದಲ್ಲ. ಬಹುತ್ವ ಇರುವ ರಾಷ್ಟ್ರದಲ್ಲಿ ನಾವು ಭಾರತೀಯರು, ನಾನು ಮೊದಲು ಭಾರತೀಯ ಆ ನಂತರ ನಮ್ಮ ಧರ್ಮ ಪಂಗಡ. ಕುವೆಂಪು ಅವರು ಹೇಳಿದ್ದು ಸರ್ವಜನಾಂಗದ ಶಾಂತಿಯ ತೋಟ, ಎಲ್ಲಾ ಜನರ ಶಾಂತಿಯ ತೋಟವೇ ಭಾರತೀಯ ದೇಶ. ಬಾಬಾ ಸಾಹೇಬ್ ಅಂಬೇಡ್ಕರ್ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ ಎಂದರು.