ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ 1167 ನಾಟಿ ಕೋಳಿಗಳು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮದ ಅಶ್ವಿನಿ ಕೋಳಿ ಫಾರಂನ ಸುಮಾರು 455 ಕೋಳಿ ಮತ್ತು 4,500 ಹಿತ್ತಲ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ನಾಶ ಮಾಡಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
ಬನ್ನಿಕೋಡ ಗ್ರಾಮ ಹಾಗೂ ಕುಂಬಾರಕೊಪ್ಪಲು ಗ್ರಾಮಗಳಿಂದ ಬೆಂಗಳೂರಿನಲ್ಲಿರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗಾಗಿ ಕಳಿಸಲಾದ ಮಾದರಿಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು, ಹೆಚ್ಚಿನ ತಪಾಸಣೆಗಾಗಿ ನಿಯಮದಂತೆ ಭೋಪಾಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಹ ಹಕ್ಕಿಜ್ವರ ಅಥವಾ ಕೋಳಿ ಶೀತಜ್ವರದ ವೈರಾಣು ಹೆಚ್5ಎನ್1 ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದರು.
ಎರಡು ಗ್ರಾಮಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1ರಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ವೈಜ್ಞಾನಿಕವಾಗಿ 2 ಮೀಟರ್ ಉದ್ದ, ಅಗಲ ಹಾಗೂ 2 ಮೀ. ಆಳದ ಗುಂಡಿ ತೆಗೆದು ಕೋಳಿಗಳನ್ನು ಹೂಳಲಾಗುತ್ತದೆ. ಈ ಸಂದರ್ಭದಲ್ಲಿ ಸುಣ್ಣ ಮತ್ತು ಮಣ್ಣನ್ನು ಪದರುಗಳಲ್ಲಿ ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.