ಬೀದರ್/ದಾವಣಗೆರೆ/ಬೆಳಗಾವಿ: ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆ ಬಹುತೇಕ ಎರಡು ವರ್ಷಗಳಿಂದ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇಂದಿನಿಂದ ಮತ್ತೆ ಶಾಲೆಗಳತ್ತ ಹೆಜ್ಜೆಹಾಕಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 0.14 ಇದ್ದು, ಜಿಲ್ಲೆಯಾದ್ಯಂತ 9 ಮತ್ತು 10 ತರಗತಿಗಳು ಸೇರಿದಂತೆ ಕಾಲೇಜನ್ನು ಆರಂಭಿಸಲಾಗಿದೆ. ಇಂದು ಬೆಳಗ್ಗೆಯಿಂದಲೂ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕೊರೊನಾ ನಿಯಮಾವಳಿಗಳ ಪ್ರಕಾರ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 583 ಶಾಲೆಗಳು ಇಂದಿನಿಂದ ಬಾಗಿಲು ತೆರೆದಿದ್ದು, ಅವುಗಳಲ್ಲಿ 166 ಸರ್ಕಾರಿ ಶಾಲೆ ಸರ್ಕಾರ ಅನುದಾನಿತ ಶಾಲೆ 141 ಹಾಗೂ ಅನುದಾನದ ರಹಿತ ಶಾಲೆಗಳು ಸೇರಿವೆ.
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್..
ಬೆಣ್ಣೆನಗರಿ ದಾವಣಗೆರೆಯಲ್ಲಿ ಇಂದಿನಿಂದ 9,10 ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿವೆ. ಜ್ಞಾನದೇಗುಲಗಳಲ್ಲಿ ವಿದ್ಯಾರ್ಥಿಗಳಿಗೆ ಹೂವಿನ ಮಳೆಸುರಿಸಿ ಪ್ರೀತಿಯಿಂದ ಸ್ವಾಗತ ಕೋರಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲಾ ಕೊಠಡಿ ಒಳಗೆ ಬಿಡಲಾಯಿತು. ಇಷ್ಟು ದಿನ ಕೇವಲ ಆನ್ಲೈನ್ ಕ್ಲಾಸ್ಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಇವತ್ತಿಂದ ಆಫ್ಲೈನ್ ಕ್ಲಾಸ್ ಆರಂಭವಾದ ಹಿನ್ನೆಲೆ ಖುಷಿಯಿಂದಲೇ ಪಾಠ ಕೇಳಿದ್ರು.