ದಾವಣಗೆರೆ :ಜಿಲ್ಲೆಯಲ್ಲಿ ಹಿಜಾಬ್-ಕೇಸರಿ ಶಾಲು ಗಲಾಟೆ ನಡೆದ ಬಳಿಕ ಇಂದು 9 ಹಾಗು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ರಜೆ ರದ್ದುಗೊಳಿಸಲಾಗಿದೆ.
ಜಿಲ್ಲೆಯಲ್ಲಿ ವಿವಾದದ ವಾತಾವರಣ ತಿಳಿಯಾಗೋವರೆಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ರಜೆ ರದ್ದು ಮಾಡಿದ್ದು, ಯಾವುದೇ ಕಾರಣಕ್ಕೆ ಅಧಿಕಾರಿಗಳು ರಜೆ ಹಾಕುವಂತಿಲ್ಲ ಎಂದಿದೆ.
ಡಿಡಿಪಿಐ, ಡಿಡಿಪಿಯು, ಬಿಇಒ, ಬಿಆರ್‌ಸಿ, ಕೋಆರ್ಡಿನೇಟರ್‌ಗಳ ರಜೆಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಎದ್ದಿರುವ ಗಲಭೆ ವಾತಾವರಣ ಸರಿ ಹೋಗುವವರೆಗೂ ಅಧಿಕಾರಿಗಳಿಗೆ ರಜೆ ಇಲ್ಲ.
ಪೊಲೀಸ್, ಶಿಕ್ಷಣ ಇಲಾಖೆ ಅಲ್ಲದೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಶಾಲೆಗಳಿಗೆ ತೆರಳಬೇಕು, ಯಾವ ಆತಂಕವೂ ಇಲ್ಲದೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇಂದಿನಿಂದ ಶಾಲೆ ಆರಂಭವಾಗುತ್ತಿರುವುದರ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಂದಿನಂತೆ ಮಕ್ಕಳು ಕೂಡ ಇಂದು ಶಾಲೆಗೆ ಆಗಮಿಸಿವೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗಿದೆ. ಜಿಲ್ಲೆಯ ಪರಿಸ್ಥಿತಿ ತಿಳಿಗೊಳಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.