ದಾವಣಗೆರೆ: ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಟೀಕೆ ಮಾಡಿದ್ದಾರೆ. ಆ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೊರೊನಾ ತಡೆ ಕುರಿತು ಕೈಗೊಂಡ ಕ್ರಮಗಳ ಕುರಿತು ಮೊದಲು ಮಾತನಾಡಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೇಬಿನಿಂದ ದುಡ್ಡು ಕೊಡ್ತೀನಿ ಅಂತಾರೆ. ಲಕ್ಷಾಂತರ ಕಾರ್ಮಿಕರು ಹೋಗುವಾಗ ಹಣ ಕೊಡಲಿಲ್ಲ, ನಾಲ್ಕೈದು ಮಂದಿ ಇದ್ದಾಗ ಬಂದು ಹಣ ಕೊಡುತ್ತೇನೆಂದು ಹೇಳುವುದು ಆಡಂಬರ, ಹುಡುಗಾಟಿಕೆ. ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಸಂಬಂಧ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತರಾಟೆಗೆ ತೆಗೆದುಕೊಂಡ್ರು.
ಈ ಹಿಂದೆ ಕೆಎಸ್ಆರ್ಟಿಸಿ ನೀಡಿದ ಚೆಕ್ ಅನ್ನೇ ನಾವು ಪಡೆದಿಲ್ಲ, ನೀವು ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಹೇಗೆ ನೀವು ಅಧ್ಯಕ್ಷರಾಗಿ ಸಹಿ ಮಾಡಿದ್ದೀರಾ. ಟೀಕೆ ಮಾಡುವುದರಿಂದ ಕೊರೊನಾ ಹೋಗಲ್ಲ, ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು. ಕೊರೊನಾ ಸದ್ಯಕ್ಕೆ ಹೋಗುತ್ತದೆ ಎಂದು ಹೇಳಲು ಆಗದು. ಕೊರೊನಾ ಹಿನ್ನೆಲೆ ರಿಜಿಸ್ಟ್ರಾರ್ ಸ್ಟ್ಯಾಂಪ್ ಡ್ಯೂಟಿ ಒಂದರಿಂದಲೇ ಅಂದಾಜು ಮೂರೂವರೆ ಸಾವಿರದಿಂದ ನಾಲ್ಕು ಸಾವಿರ ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಖೋತಾ ಆಗಿದೆ. ಕೊರೊನಾ ತಡೆ ಜೊತೆಗೆ ಆರ್ಥಿಕ ಅಭಿವೃದ್ದಿ ಮಾಡಬೇಕಿದೆ ಎಂದು ತಿಳಿಸಿದರು.
ರಿಜಿಸ್ಟ್ರೇಷನ್ ಜಾಸ್ತಿಯಾಗಬೇಕು ಎಂಬ ಉದ್ದೇಶದಿಂದ ರಿಜಿಸ್ಟ್ರಾರ್ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಮಧ್ಯಮ ವರ್ಗಕ್ಕೆ ಅನುಕೂಲ ಆಗಲಿದೆ. ಮನೆ, ಫ್ಲಾಟ್ ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ. ಈ ಸಂಬಂಧ ವಾರದೊಳಗೆ ಮಾರ್ಗಸೂಚಿ ಹೊರಡಿಸುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯ ಆಗಲಿದೆ. ಕಂದಾಯ ಇಲಾಖೆಯಿಂದ ಕೊರೊನಾ ತಡೆ ಸಂಬಂಧ 271 ಕೋಟಿ ರೂಪಾಯಿಯನ್ನು ನೀಡಲಾಗಿದೆ. ಆರೋಗ್ಯ ಇಲಾಖೆಗೆ 71 ಕೋಟಿ, ಬಿಬಿಎಂಪಿಗೆ 50 ಕೋಟಿ, ಬರಪೀಡಿತ ತಾಲೂಕುಗಳಿಗೆ ಒಟ್ಟು 112 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು 60 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವಿವರಿಸಿದರು.